ಜಂಬೂಸವಾರಿಯಲ್ಲಿ ಮಿಂಚಿದ ಮಂಡ್ಯದ ‘ಅಸ್ಮಿತೆ’ ಸ್ತಬ್ಧಚಿತ್ರ: ಸಚಿವ ಈಶ್ವರ ಖಂಡ್ರೆರಿಂದ ₹1 ಲಕ್ಷ ಘೋಷಣೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ವತಿಯಿಂದ ಪ್ರದರ್ಶಿಸಲಾದ ‘ಅಸ್ಮಿತೆ – ಸ್ತ್ರೀ ಶಕ್ತಿಯ ಅನಾವರಣ’ ಎಂಬ ವಿನೂತನ ಸ್ತಬ್ಧಚಿತ್ರವು ಅಪಾರ ಪ್ರಶಂಸೆಗೆ ಪಾತ್ರವಾಗಿದೆ.

ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಬಲೀಕರಣವನ್ನು ಪರಿಣಾಮಕಾರಿಯಾಗಿ ಬಿಂಬಿಸಿದ್ದ ಈ ಸ್ತಬ್ಧಚಿತ್ರದ ಪರಿಕಲ್ಪನೆ ಮತ್ತು ವಿನ್ಯಾಸವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರು, ವೈಯಕ್ತಿಕವಾಗಿ ₹1 ಲಕ್ಷ ನಗದು ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದಾರೆ.

ಸಮಾಜದ ಭದ್ರಬುನಾದಿಯಾಗಿರುವ ಮಾತೃತ್ವ ಹಾಗೂ ವಾತ್ಸಲ್ಯದ ಮೌಲ್ಯವನ್ನು ಸಾರುವ ಬೃಹತ್ ತಾಯಿಯ ಪ್ರತಿಕೃತಿ, ಹಾಗೆಯೇ ದುಡಿಯುವ ತಾಯಂದಿರ ಮಕ್ಕಳಿಗಾಗಿ ನಿರ್ಮಿಸಲಾದ ‘ವಾತ್ಸಲ್ಯ ಕೇಂದ್ರ’ ಮತ್ತು ‘ಶಿಶುಸಂಜೀವಿನಿ’ (ಎದೆ ಹಾಲಿನ ಸಂಗ್ರಹಣಾ ಕೇಂದ್ರ) ಪರಿಕಲ್ಪನೆಗಳ ಅನಾವರಣವಾಗಿದೆ ಈ ಸ್ತಬ್ಧ ಚಿತ್ರದಲ್ಲಿ.

ಸಾಧನೆ ಮತ್ತು ಸಮಾನತೆ ತಾರತಮ್ಯವಿಲ್ಲದ ವಾತಾವರಣ ದೊರೆತರೆ ಮಹಿಳೆಯರು ಅಗಾಧ ಸಾಧನೆ ಮಾಡಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿ, 2025ರ ಚೊಚ್ಚಲ ಅಂಧ ಮಹಿಳೆಯರ ಚುಟುಕು ವಿಶ್ವಕಪ್ ಗೆದ್ದ ಭಾರತೀಯ ತಂಡದ ಐತಿಹಾಸಿಕ ಸಾಧನೆಯ ಚಿತ್ರಣ ಕಂಡು ಬಂದಿದೆ

ಮಹಿಳಾ ರೈತರು ಕೃಷಿಯಲ್ಲಿ ಡ್ರೋನ್, ಕೃತಕ ಬುದ್ಧಿಮತ್ತೆ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ನಾವೀನ್ಯತೆಗೆ ತೆರೆದುಕೊಂಡಿರುವುದರ ಪ್ರದರ್ಶನ ಇದಾಗಿದೆ.

ಸ್ವಸಹಾಯ ಸಂಘಗಳ ಮಹಿಳೆಯರಿಂದ ಮೌಲ್ಯವರ್ಧನೆ, ಸ್ವಂತ ಮುದ್ರೆ ಹಾಗೂ ‘ಅಕ್ಕ ಕೆಫೆ’ಯಂತಹ ಮಾದರಿ ಉಪಕ್ರಮಗಳ ಮೂಲಕ ಮಹಿಳೆಯರು ಸೇವಾ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವುದರ ಚಿತ್ರಣ ಈ ಸ್ತಬ್ಧ ಚಿತ್ರದಲ್ಲಿ ಅಡಗಿದೆ

ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯರ ಋತುಸ್ರಾವ ನೈರ್ಮಲ್ಯಕ್ಕಾಗಿ ಕೈಗೊಂಡ ಕ್ರಮಗಳು ಹಾಗೂ 32,000ಕ್ಕೂ ಹೆಚ್ಚು ಮುಟ್ಟಿನ ಕಪ್‌ಗಳನ್ನು ಉಚಿತವಾಗಿ ವಿತರಿಸಿ ಜಾಗೃತಿ ಮೂಡಿಸಿದ ಸಾಮಾಜಿಕ ಕ್ರಾಂತಿಯ ಪರಿಚಯಿಸಲಾಗಿದೆ.

ತಾಯ್ತನದ ಮಮತೆಯಿಂದ ಹಿಡಿದು ಬಾಹ್ಯಾಕಾಶ ವಿಜ್ಞಾನ ಮತ್ತು ಹಸಿರು ತಂತ್ರಜ್ಞಾನದವರೆಗೆ ಮಹಿಳೆಯರು ಸಾಧಿಸುತ್ತಿರುವ ಆಮೂಲಾಗ್ರ ಪ್ರಗತಿಯನ್ನು ಈ ಸ್ತಬ್ಧಚಿತ್ರವು ಅತ್ಯಂತ ಆಕರ್ಷಕವಾಗಿ ಸಾರಿದೆ.