ಕುರುಡು-ಕಿವುಡು ಆಗಿದ್ದ ಕೇಂದ್ರ ಸರ್ಕಾರ ಈಗ ಕೊರೊನಾಕ್ಕಾಗಿ ರೋಧಿಸುತ್ತಿದೆ -ಸಿದ್ದರಾಮಯ್ಯ

ಹುಬ್ಬಳ್ಳಿ: ಕುರುಡು-ಕಿವುಡು ಆಗಿದ್ದ ಕೇಂದ್ರ ಸರ್ಕಾರ ಈಗ ಕೊರೊನಾಕ್ಕಾಗಿ ರೋಧಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಕಾರವಾರ ರಸ್ತೆಯಲ್ಲಿ ಬುಧವಾರ ವಿವಿಧ ಪಕ್ಷದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
2015ರಲ್ಲಿ ಜಿಡಿಪಿ ಅಂದಾಜು ಮಾಡಿದ ಮೂಲ ವರ್ಷವನ್ನು 2004-05ರಿಂದ 2011-12ಕ್ಕೆ ಬದಲಾಯಿಸಲಾಯಿತು. ಅದರ ನಂತರ ಬಣ್ಣ ಬಯಲಾಗಬಾರದೆಂದು ಅಧಿಕೃತ ಅಂಕಿ ಅಂಶಗಳನ್ನು ತಡೆದು, ಈಗ ಎಲ್ಲವನ್ನು ಕೊರೊನಾ ಲೆಕ್ಕಕ್ಕೆ ಬರೆದು ಕೈತೊಳೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಕೇಂದ್ರ ಸರಕಾರವನ್ನು ತಿವಿದರು.
ದೇಶದ ತ್ರೈಮಾಸಿಕ ಜಿಡಿಪಿ ಮಹಾಕುಸಿತಕ್ಕೆ, ಕೇಂದ್ರ ಸರ್ಕಾರದ ದುರಾಡಳಿತವೇ ಕಾರಣ ಎಂದು ಸಿದ್ದು ಹೇಳಿದರು.
ದೇಶದ ಜಿಡಿಪಿ ಶೇಕಡಾ 23.9ರಷ್ಟು ಕುಸಿತ ಕಂಡಿರುವುದು ಆಘಾತಕಾರಿ ಬೆಳವಣಿಗೆ ನಿಜ. ಆದರೆ, ಈ ಕುಸಿತದ ಪೂರ್ಣ ಹೊಣೆಯನ್ನು ಕೊರೊನಾ ಮೇಲೆ ಹೇರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜವಾಬ್ದಾರಿಯನ್ನು ನುಣುಚಿ ಕೊಳ್ಳುವುದು ಇನ್ನೂ ಹೆಚ್ಚಿನ ಆಘಾತಕಾರಿ ಬೆಳವಣಿಗೆ ಎಂದು ಹೇಳಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದೇಶದ ಆರ್ಥಿಕತೆ ರೋಗಗ್ರಸ್ತವಾಗಿದೆ ಎನ್ನುವುದನ್ನು ಸರ್ಕಾರದ ಅಧಿಕೃತ ದಾಖಲೆಗಳ ಹೇಳುತ್ತಿವೆ ಎಂದರು.
ಲಾಕ್ ಡೌನ್ ಅಗತ್ಯವಿತ್ತು ನಿಜ, ಆದರೆ ಅವೈಜ್ಞಾನಿಕವಾಗಿ ಕೈಗೊಂಡ ನಿರ್ಧಾರದಿಂದ ಅದರಿಂದ ಲಾಭಕ್ಕಿಂತ ನಷ್ಟವಾಗಿದ್ದೇ ಹೆಚ್ಚು. ಇದರ ಪೂರ್ಣ ಹೊಣೆಯನ್ನು ಪ್ರಧಾನ ಮಂತ್ರಿಯವರೇ ವಹಿಸಿಕೊ ಳ್ಳಬೇಕಾಗುತ್ತದೆ ಎಂದು ತಿಳಿಸಿದರು.