ಡಾ. ಶಿಲ್ಪರ ಹೆಜ್ಜೆ ಮಾದರಿ

(ಜಿ.ಆರ್.ಸತ್ಯಲಿಂಗರಾಜು )
ಮೈಸೂರು: ಕೊರೊನಾ ಲಸಿಕೆ ಹೊಸ ವರ್ಷಕ್ಕೆ ಬರುತ್ತೆ ಎಂಬ ಆಶಾವಾದ ಇದೆ.
ಮನುಷ್ಯನ ಮೇಲೆ ಪ್ರಾಯೋಗಿಕವಾಗಿ ಲಸಿಕೆ ಕೊಟ್ಟು, ಅಡ್ಡ ಪರಿಣಾಮ ಏನು? ಪ್ರತಿಕಾಯವನ್ನ ಸಮರ್ಥವಾಗಿ ರೂಪಿಸಿ ಕೊರೊನಾ ವೈರಸ್ ನ್ನ ಅಂತ್ಯಗೊಳಿಸಬಹುದಾ? ಎಂಬಿತ್ಯಾದಿಯನ್ನ ಪರಿಶೀಲಿಸಿಕೊಳ್ಳಲಾಗುತ್ತೆ.
ಇಂಥ ಪ್ರಯೋಗ ಮೈಸೂರಿನ ಜೆಎಸ್ ಎಸ್ ವೈದ್ಯಕೀಯ ಕಾಲೇಜಲ್ಲು ನಡೆದಿದೆ.
ಪ್ರಾಯೋಗಿಕವಾಗಿ ಲಸಿಕೆ ತೆಗೆದುಕೊಳ್ಳಲು ಮುಂದೆ ಬರುವವರು ಅಪರೂಪ. ಇಂಥ ಅಪರೂಪದವರ ಸಾಲಿಗೆ ಸೇರಿರುವುದು ಡಾ.ಶಿಲ್ಪ ಸಂತೃಪ್ತ್.
ಮೈಸೂರಿನ ಗೋಪಾಲಗೌಡ ಸ್ಮಾರಕ ಆಸ್ಪತ್ರೆಯ ಮುಖ್ಯಸ್ಥ ಡಾ. ಸಂತೃಪ್ತ್ ಶಸ್ತ್ರ ಚಿಕಿತ್ಸಾ ತಜ್ಞ. ಇವರ ಪತ್ನಿ ಡಾ. ಶಿಲ್ಪ ಪ್ರಸೂತಿ ತಜ್ಞೆ ಜತೆಗೆ ‘ಸಿರಿ ಕ್ಯಾರಿ’ ಕೃತಕ ಗರ್ಭಧಾರಣಾ ಕೇಂದ್ರದ ಮುಖ್ಯಸ್ಥೆಯಾಗಿದ್ದು, ಕಾಲೇಜಿನಲ್ಲಿ ಅನೇಕ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದಾರೆ.
ಡಾ. ಶಿಲ್ಪ ಅವರು ಅಕ್ಟೋಬರ್ ಮೊದಲ ದಿನವೇ ಕೊರೊನಾ ಲಸಿಕೆಯನ್ನು ಸ್ವಯಂ ಪ್ರೇರಿತರಾಗಿ ಪಡೆದುಕೊಂಡು, ಇತರರಿಗೆ ಮಾದರಿಯಾಗಿದ್ದಾರೆ.
ಅಂದಹಾಗೆ ಶಾಂತವೇರಿ ಗೋಪಾಲಗೌಡ ಸ್ಮಾರಕ ಆಸ್ಪತ್ರೆಯಲ್ಲೇ ಜಿಲ್ಲೆಯ ಪ್ರಪ್ರಥಮ ಕೊರೊನಾ ಸೋಂಕಿತ ವ್ಯಕ್ತಿಯನ್ನ ಆರಂಭದಲ್ಲೆ ಗುರುತಿಸಿ, ಕೊರೊನಾ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಒಂದು ವೇಳೆ ಸೋಂಕನ್ನ ಇಲ್ಲಿ ಗುರುತಿಸಲು ಎಡವಿದ್ದರೆ, ಸೋಂಕು ಶುರುವಿನಲ್ಲೆ ವ್ಯಾಪಿಸಿ ಬಿಡುವ ಸಂಭವ ಇತ್ತು. ಇದೇ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸಾ ಘಟಕ ಆರಂಭಿಸಿ, ಅನೇಕರನ್ನ ಉಪಚರಿಸಿದ ಖ್ಯಾತಿ ತನ್ನದಾಗಿಸಿಕೊಂಡಿದೆ. ಈಗ ಅದೇ ಆಸ್ಪತ್ರೆಯ ಮುಖ್ಯಸ್ಥರೇ ಕೊರೊನಾ ಲಸಿಕೆ ಪ್ರಯೋಗಕ್ಕೆ ಒಳಗಾಗಿರುವುದು ವಿಶೇಷ.
ಲಸಿಕೆ ಬಗ್ಗೆ ಸಾಮಾನ್ಯ ಜನ ಅನುಮಾನದಿಂದ ನೋಡಬಾರದು, ಅವರಲ್ಲಿ ಧೈರ್ಯ ತುಂಬಬೇಕು ಎಂಬ ಸದುದ್ದೇಶದಿಂದ ಡಾ. ಶಿಲ್ಪ ಸಂತೃಪ್ತ್ ಇಟ್ಟ ಹೆಜ್ಹೆ ಇತರರಿಗೆ ಮಾದರಿಯಾಗಿರುವುದರಲ್ಲಿ ಅನುಮಾನವಿಲ್ಲ.