ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಗಾದಿ ಬಿಜೆಪಿ ಪಾಲಾಗಿದ್ದು, ಕಾಂಗ್ರೆಸ್‍ಗೆ ಸೋಲುಂಡಿದೆ.
ಆರೋಗ್ಯ ಸಚಿವರೂ ಜಿಲ್ಲಾ ಉಸ್ತುವಾರಿ ಆದ ಸಚಿವ ಡಾ.ಕೆ.ಸುಧಾಕರ್ ಅವರ ತಂತ್ರ ಫಲಿಸಿದೆ.
ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ತೀವ್ರ ಕುತೂಹಲ ಸೃಷ್ಟಿಸಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಕಾಂಗ್ರೆಸ್ ಆಡಳಿತವೇ ಮುಂದುವರಿಯಲಿದೆ ಎಂದು ಮೊದಲಿಗೆ ಅಂದಾಜಿಸಲಾಗಿತ್ತು.
ಆದರೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ತಂತ್ರದಿಂದಾಗಿ ನಿರೀಕ್ಷೆ ಉಲ್ಟಾ ಆಗಿ ನಗರಸಭೆ ಬಿಜೆಪಿಗೆ ಒಲಿದಿದ್ದು, ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯ ಆನಂದರೆಡ್ಡಿ 22 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ನ ಅಂಬಿಕಾ ಕೇವಲ 9 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಸದಸ್ಯೆ ವೀಣಾ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 31 ಸದಸ್ಯರಿರುವ ನಗರಸಭೆಯಲ್ಲಿ, ಕಾಂಗ್ರೆಸ್ ಪಕ್ಷ 16, ಬಿಜೆಪಿ 9, ಜೆಡಿಎಸ್ 2 ಹಾಗೂ 4 ಪಕ್ಷೇತರ ಸದಸ್ಯರಿದ್ದಾರೆ. ಸಂಖ್ಯಾಬಲವನ್ನು ನೋಡಿದರೆ ಕಾಂಗ್ರೆಸ್ ಗೆ ಸುಲಭವಾಗಿ ಅಧಿಕಾರದ ಚುಕ್ಕಾಣಿ ದೊರೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಬಿಜೆಪಿ ಗೆಲುವು ಸಾಧಿಸುವಂತೆ ಸಚಿವ ಡಾ.ಕೆ.ಸುಧಾಕರ್ ಎಲ್ಲಾ ನಗರಸಭಾ ಸದಸ್ಯರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಪೈಪೆÇೀಟಿ ಜೋರಾಗಿತ್ತು. ಈ ಸಂದರ್ಭದಲ್ಲಿ ಸಚಿವ ಡಾ.ಕೆ.ಸುಧಾಕರ್ ಪಕ್ಷೇತರ ಸದಸ್ಯ ಆನಂದರೆಡ್ಡಿ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಬಿಜೆಪಿಯಿಂದ ಬೆಂಬಲ ಕೊಡಿಸುವ ಕಾರ್ಯತಂತ್ರವನ್ನು ಹೆಣೆದರು. ಇದರ ಪರಿಣಾಮ, ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಬಿಜೆಪಿ ಮೇಲುಗೈ ಸಾಧಿಸಿದೆ.

