ತುಮಕೂರು: ಮತದಾನಕ್ಕೆ ಇನ್ನೈದು ದಿನ ಇರುವಂತೆಯೇ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಶಿರಾದಲ್ಲಿ ಶುಕ್ರವಾರ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.
ಈ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ರಾಜೇಶ್‍ಗೌಡರನ್ನು ಗೆಲ್ಲಿಸಲೇಬೇಕೆಂಬ ಉಮೇದಿನಲ್ಲಿ ಬಿ.ಎಸ್.ವೈರ ಪುತ್ರ ವಿಜಯೇಂದ್ರ ಟೊಂಕ ಕಟ್ಟಿ ನಿಂತಿದ್ದಾರೆ.
ಇದರ ಬೆನ್ನಲ್ಲೇ ಯಡಿಯೂರಪ್ಪ ಅವರು ಕ್ಷೇತ್ರದಲ್ಲಿ ಶುಕ್ರವಾರ ಸಂಚಾರ ಮಾಡಿ ಮತಯಾಚಿಸಿರುವುದು ಕ್ಷೇತ್ರದಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದೆ.
ಚುನಾವನಾ ಪ್ರಚಾರ ವೇಳೆ ಸಿಎಂ ಯಡಿಯೂರಪ್ಪನವರು ಮಾತನಾಡಿ, ಆಡಿದ ಮಾತನ್ನು ತಪ್ಪುವವನಲ್ಲ
ಈ ಯಡಿಯೂರಪ್ಪ; ಅಕ್ಷರಶಃ ನಡೆಸಿಕೊಡುವಂತವನು ಎಂದು ತಿಳಿಸಿದರು.
ಕೋವಿಡ್ ನಿಂದ ಕೊಂಚಮಟ್ಟಿಗೆ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ಇದೀಗ ಸುಧಾರಣೆ ಆಗುತ್ತಿದೆ. ರಾಜ್ಯದ ಎಲ್ಲ ಭಾಗಗಳೂ ಶರವೇಗದಲ್ಲಿ ಅಭಿವೃದ್ಧಿ ಆಗುತ್ತಿವೆ. ಶಿರಾಗೆ ಈ ವಿಷಯದಲ್ಲಿ ಅನ್ಯಾಯವಾಗಲು ನಾನು ಬಿಡುವುದಿಲ್ಲ ಎಂದರು.
ಶಿರಾವನ್ನು ಮಾದರಿ ತಾಲ್ಲೂಕು ಮಾಡುತ್ತೇನೆ. ತುಮಕೂರು ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸುತ್ತೇನೆ ಎಂದು ಸಿಎಂ ನೆರೆದಿದ್ದ ಮತದಾರರಿಗೆ ಭರವಸೆ ನೀಡಿದರು.
ನವೆಂಬರ್ 3ರ ನಂತರ ಈ ಕ್ಷೇತ್ರದಲ್ಲಿ ಆಗಬೇಕಿರುವ ಎಲ್ಲ ಕೆಲಸಗಳನ್ನೂ ಮಾಡಿಕೊಡುತ್ತೇನೆ. ಯಾವುದೇ ಜಾತಿ ಪ್ರಶ್ನೆ ಇಲ್ಲ. ಎಲ್ಲ ಜಾತಿಯ ಜನರೂ ಉತ್ತಮವಾಗಿ ಬದುಕಬೇಕು ಎನ್ನುವುದು ನನ್ನ ಅಭಿಲಾಶೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿಯನ್ನು ಮತದಾರರು ದೊಡ್ಡ ಅಂತರದಲ್ಲಿ ಗೆಲ್ಲಿಸಬೇಕು. ಅಂದರೆ; ಡಾ. ರಾಜೇಶ್ ಗೌಡ ಅವರನ್ನು 25-35 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ನೀವು ಆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಸಿಎಂ ಮತದಾರರಿಗೆ ಕರೆಯಿತ್ತರು.
ಮದಲೂರು ಕೆರೆ ಮುಂಭಾಗ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಕೆರೆ ತುಂಬಿಸಲಾಗುವುದು. ಕೆರೆ ತುಂಬಿಸಬೇಕು ಎಂಬುದು ಇಲ್ಲಿನ ಜನರ ಪ್ರಮುಖ ಬೇಡಿಕೆ. ಈ ಹಿಂದೆ ನಾನು ಅಧಿಕಾರದಲ್ಲಿದ್ದಾಗ ಇದೇ ಕೆರೆಗೆ ನೀರು ಬಿಡಲು ಕಾಲುವೆ ನಿರ್ಮಿಸಲು ಅನುದಾನ ಮಂಜೂರು ಮಾಡಿದ್ದೆ. ಮುಂದಿನ 6 ತಿಂಗಳಲ್ಲಿ ಮದಲೂರು ನೀರು ತುಂಬಿಸಲಾಗುವುದು. ನಾನೇ ಬಂದು ಕೆರೆಗೆ ಪೂಜೆ ಸಲ್ಲಿಸುತ್ತೇನೆ ಎಂದು ಬಿಎಸ್ ವೈ ಘೋಷಿಸಿದರು.
ಸಿಎಂರೊಂದಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಡಿಸಿಎಂ ಗೋವಿಂದ ಕಾರಜೋಳ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಶ್ರೀರಾಮುಲು, ಬಿ.ವೈ.ವಿಜಯೇಂದ್ರ ಇನ್ನಿತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

