ಕಾಂಗ್ರೆಸ್, ಜೆಡಿಎಸ್ ಗೆ ಮತ ಹಾಕುವುದು ವ್ಯರ್ಥ -ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಮತ ಹಾಕುವುದು ವ್ಯರ್ಥ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಶಿರಾದಲ್ಲಿ ಶನಿವಾರ ನಾಯಕ ಜನಾಂಗದವರು ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಡಿಸಿಎಂ ಪಾಲ್ಗೊಂಡು ಮಾತನಾಡಿದರು.
ಬಿಜೆಪಿ ಸರಕಾರ ಸರ್ವಜನರ ಕಲ್ಯಾಣಕ್ಕಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಸರಕಾರ. ಹೀಗಾಗಿ ಈ ದೇಶದಲ್ಲಿ ಎಲ್ಲ ಜಾತಿ, ಧರ್ಮಗಳನ್ನು ಪ್ರತಿನಿಧಿಸುವ ಏಕೈಕ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಆದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಮತ ಹಾಕುವುದು ವ್ಯರ್ಥ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಹೇಳಿದರು.
ಮಹರ್ಷಿ ವಾಲ್ಮೀಕಿ ಅವರ ಪ್ರೇರಣೆಯೊಂದಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಕರ್ನಾಟಕವನ್ನು ನಮ್ಮ ಪಕ್ಷ ಕಟ್ಟುತ್ತಿದೆ ಎಂದು ಹೇಳಿದ ಡಿಸಿಎಂ ಬಿಜೆಪಿ ಎಂದರೆ ಅಭಿವೃದ್ಧಿ. ಬಿಜೆಪಿ ಎಂದರೆ ಸರ್ವ ಸಮಾನತೆ ಎಂದು ನುಡಿದರು.
ಶಿರಾವನ್ನು ಮಾದರಿ ತಾಲ್ಲೂಕು ಮಾಡುವುದು, ಮುದಲೂರು ಕೆರೆ ಸೇರಿ 65 ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಇಡೀ ಶಿರಾವನ್ನು ಶಿಕಾರಿಪುರದಂತೆ ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಅಸತ್ಯವಿಲ್ಲ. ಮುಖ್ಯಮಂತ್ರಿ ಹೇಳಿದ್ದು ನಡೆದೇ ನಡೆಯುತ್ತದೆ ಎಂದು ಅಶ್ವಥನಾರಾಯಣ್ ಹೇಳಿದರು.
ಸಭೆಯಲ್ಲಿ ಸುರಪುರ ಶಾಸಕ ರಾಜೂ ಗೌಡ, ರೇಣುಕಾಚಾರ್ಯ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಮುಂತಾದವರು ಉಪಸ್ಥಿತರಿದ್ದರು.