ಬೆಂಗಳೂರು: ಕೋವಿಡ್ ನಿಯಂತ್ರಣ ವಿಷಯದಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳು ಸಮಾಧಾನಕರವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಹಾಗೂ ವ್ಯಾಕ್ಸಿನ್ ವಿತರಣೆಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಅವರು ಬುಧವಾರ ವಿಡಿಯೋ ಸಂವಾದ ನಡೆಸಿದರು.
ಲಾಕ್ ಡೌನ್ ಸಡಿಲಿಕೆ ಬಳಿಕ ಹೆಚ್ಚಳವಾಗಿದ್ದ ಸೋಂಕು ಮತ್ತು ಸಾವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದು ಸಮಾಧಾನಕರ ಸಂಗತಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳ ಮೂಲಕ ಸಂಪೂರ್ಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಮುಂಬರುವ ಚಳಿಗಾಲ ಮತ್ತು ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕಾರ್ಯತಂತ್ರ ರೂಪಿಸಬೇಕು. ಅಂತಾರಾಷ್ಟ್ರೀಯ ಮತ್ತು ಅಂತರಾಜ್ಯ ಪ್ರಯಾಣಿಕರ ಮೇಲೆ ನಿಗಾವಹಿಸಬೇಕು. ಹಾಗೆಯೇ ಐಎಲ್ ಐ ಮತ್ತು ಸಾರಿ ಪ್ರಕರಣಗಳನ್ನು ಪತ್ತೆಹಚ್ಚಿ ಟೆಸ್ಟ್ ಗೆ ಒಳಪಡಿಸಿ ಸೋಂಕಿನ ಹರಡುವಿಕೆ ನಿಯಂತ್ರಿಸಬೇಕು. ವ್ಯಾಕ್ಸಿನ್ ವಿಷಯದಲ್ಲಿ ಈಗಾಗಲೇ ಕೆಲ ಸೂಚನೆ ನೀಡಲಾಗಿದೆ. ಆ ಬಗ್ಗೆಯೂ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಕೈಗೊಂಡಿರುವ ಕ್ರಮಗಳನ್ನು ಸಚಿವ ಸುಧಾಕರ್ ಅವರು ವಿವರಿಸಿದರು.
ಲಾಕ್ ಡೌನ್ ಗೆ ಮುಂಚೆ ಉತ್ತಮವಾಗಿ ನಿಯಂತ್ರಣದಲ್ಲಿದ್ದ ಕೋವಿಡ್ ಬಳಿಕ ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ಪ್ರಯಾಣಿಕರು ಮತ್ತು ನೆರೆಯ ಐದು ರಾಜ್ಯಗಳ ಸಂಚಾರ ಸಂಪರ್ಕದಿಂದ ಹೆಚ್ಚಳವಾಯಿತು. ಆದರೂ ಕಟ್ಟುನಿಟ್ಟಿನ ಕ್ರಮ ಮತ್ತು ಟೆಸ್ಟ್ ಸಂಖ್ಯೆ ಹೆಚ್ಚಳದ ಮೂಲಕ ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಮರಣದ ಪ್ರಮಾಣವನ್ನು ಶೇಕಡಾ ಒಂದಕ್ಕಿಂತ ಕಡಿಮೆ ಮಾಡುವುದು ನಮ್ಮ ಗುರಿ ಎಂದು ಸಚಿವ ಸುಧಾಕರ್ ಅವರು ಹೇಳಿದರು.
ಮುಂದಿನ ಚಳಿಗಾಲ ಮತ್ತು ಹಬ್ಬದ ದಿನಗಳಲ್ಲಿ ನಮ್ಮ ಕಾರ್ಯತಂತ್ರದಲ್ಲಿ ರಾಜಿ ಮಾಡಿಕೊಳ್ಳದೆ ಎಚ್ಚರಿಕೆ ಯಿಂದ ಮುಂದುವರಿಯಲಾಗುವುದು ಎಂದರು.
ದಸರಾ ಮಹೋತ್ಸವ ಸಂದರ್ಭದಲ್ಲಿ ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಮುಂದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೂಡ ನಿರ್ಬಂಧಗಳನ್ನು ಸಡಿಲಿಸುವುದಿಲ್ಲ ಎಂದವರು ಹೇಳಿದರು.
ರಾಜ್ಯದಲ್ಲಿರುವ ಕೇಂದ್ರದ ಕೆಲ ಲ್ಯಾಬ್ ಗಳಲ್ಲಿ ಟೆಸ್ಟ್ ಗಳ ಸಂಖ್ಯೆ ಹೆಚ್ಚಿಸಲು ಸೂಚನೆ ನೀಡಬೇಕು, ಆರ್ ಟಿಪಿಸಿಆರ್ ಕಿಟ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಬೇಕು ಮತ್ತು ಆಕ್ಸಿಜನ್ ಪ್ಲಾಂಟ್ ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದರು.
ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಹಾಜರಿದ್ದರು.

