ಬೆಂಗಳೂರು: ಕೋವಿಡ್-19 ಸಂಕಷ್ಟದ ನಡುವೆ ಇದೇ ಮೊದಲ ಬಾರಿಗೆ ವರ್ಚ್ಯುಯಲ್ ಆಗಿ ನಡೆಯಲಿರುವ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಮೇಳ-2020 (ಬಿಟಿಎಸ್) ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನ. 19ರಂದು ಉದ್ಘಾಟಿಸಲಿದ್ದಾರೆ ಎಂದು ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಬುಧವಾರ ತಿಳಿಸಿದರು.
ಬಿಟಿಎಸ್ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಿಜ್ಞಾನ ಹಾಗೂ ತಾಂತ್ರಿಕತೆ ಬಳಕೆಗೆ ಹೆಚ್ಚು ಒತ್ತು ನೀಡುತ್ತಿರುವ ಈ ಮೇಳವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದರು.
ನ. 19ರಿಂದ 21ರವರೆಗೆ ನಡೆಯಲಿರುವ ಈ ಮೇಳಕ್ಕೆ ಜಗತ್ತಿನೆಲ್ಲೆಡೆಯ ಉದ್ಯಮ ವಲಯದಿಂದ ಹಿಂದೆಂದಿಗಿಂತ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.
ಜಗತ್ತಿನೆಲ್ಲೆಡೆ ಗಮನ ಸೆಳೆದಿರುವ ಬೆಂಗಳೂರು ತಂತ್ರಜ್ಞಾನ ಮೇಳದ 23ನೇ ಆವೃತ್ತಿ ಇದಾಗಿದೆ ಎಂದರು.
ರಾಜ್ಯ ಸರ್ಕಾರವು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸಹಭಾಗಿತ್ವದಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಜೈವಿಕ ತಂತ್ರಜ್ಞಾನದ ಬೆಳವಣಿಗೆಯು ಕೃಷಿ ಹಾಗೂ ಆರೋಗ್ಯ ಸೇವೆಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಉಂಟು ಮಾಡಲಿದೆ. ಇದನ್ನು ಬಳಸಿಕೊಂಡು ಆಹಾರೋತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ ಮತ್ತಿತರ ವಿಧಾನಗಳ ಮೂಲಕ ವ್ಯವಸಾಯ ಕ್ಷೇತ್ರ ಅವಲಂಬಿಸಿರುವವರಿಗೆ ಬಲ ತುಂಬುವ ಅಗತ್ಯವಿದೆ. ಹಾಗೆಯೇ ವೈದ್ಯಕೀಯ ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕಾಗಿದೆ ಎಂದರು.
ಶಿಕ್ಷಣದಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ ಎಂದ ಅವರು ಈಗ ನಮ್ಮದು ಉದ್ಯಮ ಆಧಾರಿತ ಆರ್ಥಿಕತೆಯಾಗಿದೆ. ಮುಂಬರುವ ದಿನಗಳಲ್ಲಿ ಇದು ಸಾಂಸ್ಥಿಕ ಆಧಾರಿತ ಆರ್ಥಿಕತೆಯಾಗಿ ಬದಲಾಗಬೇಕಿದೆ ಎಂದು ಉಪ ಮುಖ್ಯಮಂತ್ರಿ ವಿವರಿಸಿದರು.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಉಪಸ್ಥಿತರಿದ್ದರು.

