ಶೀಘ್ರ ಜನೌಷಧ ಕೇಂದ್ರದಲ್ಲಿ ಆಯುರ್ವೇದಿಕ್ ಔಷಧ -ಕೇಂದ್ರ ಸಚಿವ ಡಿ.ವಿ.ಎಸ್.

ಬೆಂಗಳೂರು: ಜನೌಷಧ ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧ ಮಾರಾಟಕ್ಕೆ ಅವಕಾಶ ಕೊಡಲ್ಲ. ಆದರೆ, ಮುಂದಿನ ದಿನಗಳಲ್ಲಿ ಕಡಿಮೆ ದರದಲ್ಲಿ ಆಯುರ್ವೇದಿಕ್ ಔಷಧ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪ್ರಾಂತೀಯ ಕಚೇರಿಯನ್ನು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಗಳನ್ನು ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದ್ದು, ಜನೌಷಧಿ ಮೂಲಕ ಜನರಿಗೆ ಶೇ. 10ರಿಂದ ಶೇ. 90ರವರೆಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತದೆ ಎಂದು ತಿಳಿಸಿದರು.
ಜನರಿಕ್ ಮೆಡಿಸಿನ್ ಆ್ಯಪ್ ನಮ್ಮಲ್ಲಿದ್ದು, ನಿಮ್ಮ ಸಮೀಪದಲ್ಲಿ ಎಲ್ಲಿ ಜನರಿಕ್ ಔಷಧ ಮಳಿಗೆ ಇದೆ ಎಂದು ತಿಳಿಸುತ್ತದೆ. ಜೊತೆಗೆ ನಿಮಗೆ ಬೇಕಿರುವ ಔಷಧದ ಹೆಸರನ್ನು ಹಾಕಿದರೆ, ಆ ಔಷಧದ ಫಾರ್ಮೂಲಾ ಹೊಂದಿರುವ ಇತರೆ ಬ್ರಾಂಡ್ ನ ಯಾವ ಔಷಧ ಮಳಿಗೆಯಲ್ಲಿದೆ ಎಂಬುದನ್ನು ಆ್ಯಪ್ ತೋರಿಸುತ್ತದೆ ಎಂದರು.
ರಾಜ್ಯದ ವಿವಿಧೆಡೆ ಶೀಘ್ರದಲ್ಲಿ 1 ಸಾವಿರ ಜನರಿಕ್ ಔಷಧ ಮಳಿಗೆಗಳನ್ನು ತೆರೆಯುವ ಗುರಿಹಾಕಿಕೊಳ್ಳಲಾಗಿದೆ ಎಂದು ಡಿವಿಎಸ್ ತಿಳಿಸಿದರು.
ಸಾಮಾನ್ಯ ಕಾಯಿಲೆಯಾದ ಬಿಪಿ, ಶುಗರ್ ಇದ್ದರೆ ಬ್ರಾಂಡೆಡ್ ಔಷಧಕ್ಕೆ ಸುಮಾರು 2 ಸಾವಿರದಿಂದ ಎರಡೂವರೆ ಸಾವಿರ ರೂಪಾಯಿ ಕೊಡಬೇಕು. ಆದರೆ, ಜನೌಷಧ ಮೂಲಕ ಕೇವಲ 400 ರೂಪಾಯಿಯಿಂದ 500 ರೂಪಾಯಿಗಳಷ್ಟು ಖರ್ಚಾಗುತ್ತಿದೆ ಎಂದು ತಿಳಿಸಿದರು.
ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ, ಮೆಡಿಕಲ್ ಆಸ್ಪತ್ರೆಗಳಲ್ಲಿ ಜನೌಷಧಿಗಳನ್ನೇ ಬರೆಯುವ ಬಗ್ಗೆ ಸೂಚನೆ ನೀಡಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಅವರ ಜೊತೆಗೂ ಚರ್ಚಿಸಲಾಗಿದೆ. ಒಮ್ಮೆ ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಚಾಲನೆ ಸಿಕ್ಕರೆ ನಿಧಾನವಾಗಿ ಜನರಲ್ಲಿ ಪ್ರಚಾರ ಉಂಟಾಗುತ್ತದೆ ಎಂದು ಸಚಿವ ಸದಾನಂದ ಗೌಡ ಅವರು ತಿಳಿಸಿದರು.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರಕುಮಾರ್, ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಸೇರಿದಂತೆ ಹಿರಿಯ ಸಹಕಾರಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.