ಬೆಂಗಳೂರು: ರಾಜ್ಯಾದ್ಯಂತ ಗುಣಮಟ್ಟದ ಆಂಬ್ಯುಲೆನ್ಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.
ಮಾಹಿತಿ ತಂತ್ರಜ್ಞಾನ ವಲಯದ ಐಡೆಕ್ ಕಂಪನಿ ಪ್ರತಿನಿಧಿಗಳು, ತಜ್ಞರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಗುತ್ತಿಗೆ ಕರಾರು ಕರಡು ಕುರಿತು ಶುಕ್ರವಾರ ಸಭೆ ನಡೆಸಿದ ಸಚಿವರು ಈ ಸೂಚನೆಗಳನ್ನು ನೀಡಿದರು.
ತುರ್ತು ಆರೋಗ್ಯ ಸೇವೆ ನೀಡುವ ಆಂಬ್ಯುಲೆನ್ಸ್ ಗಳ ಸೇವೆ ಮಹತ್ವದ್ದಾಗಿದೆ. ಸದ್ಯ ನಮ್ಮಲ್ಲಿರುವ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿದ್ದು, ಅವುಗಳನ್ನು ನಿವಾರಿಸಿ ಆಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಗುಣಮಟ್ಟದ ನಿರ್ವಹಣಾ ಪದ್ಧತಿ ಅಳವಡಿಸಿಕೊಳ್ಳಬೇಕಿದೆ ಎಂದೂ ಅವರು ಅಭಿಪ್ರಾಯಪರು.
108 ಆಂಬ್ಯುಲೆನ್ಸ್ ಸೇವೆಗೆ ರಾಜ್ಯಸರ್ಕಾರ ದೊಡ್ಡ ಮೊತ್ತದ ಹಣ ನೀಡುತ್ತದೆ. ಆದರೆ ಅದಕ್ಕೆ ತಕ್ಕಂತೆ ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇಶದಲ್ಲೇ ಮಾದರಿ ಆಗುವಂತಹ ವ್ಯವಸ್ಥೆ ಜಾರಿಗೊಳಿಸಬೇಕಿದೆ. ಅದಕ್ಕಾಗಿ ಹೊಸದಾಗಿ ಟೆಂಡರ್ ನೀಡುವಾಗ ಲೋಪಗಳಿಗೆ ಅವಕಾಶವಿಲ್ಲದಂತೆ ಜಾಗತಿಕ ಮಟ್ಟದ ಸೇವೆ ನೀಡುವ ಸಂಸ್ಥೆ/ ಕಂಪನಿಗಳ ಒಕ್ಕೂಟಕ್ಕೆ ಗುತ್ತಿಗೆ ನೀಡಬೇಕು ಎಂದು ಸೂಚನೆ ನೀಡಿದರು.

