ಡಾ.ಗುರುಪ್ರಸಾದ ಎಚ್ ಎಸ್
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಸರ್ ಸಿ.ವಿ.ರಾಮನ್, ಎಂದೇ ಸುಪ್ರಸಿದ್ಧರಾಗಿರುವ ಚಂದ್ರಶೇಖರ ವೆಂಕಟ ರಾಮನ್ ಅವರು, ನೋಬೆಲ್ ಪ್ರಶಸ್ತಿ ಗಳಿಸಿರುವ, ಪ್ರಪ್ರಥಮ ಭಾರತೀಯ ವಿಜ್ಞಾನಿ.
ಅವರದೇ ಹೆಸರಿನಿಂದ ಸೂಚಿಸಲಾಗುವ ರಾಮನ್ ಎಫೆಕ್ಟ್ (ಬೆಳಕಿನ ಚದುರುವಿಕೆ ಪರಿಣಾಮ) ಸಿದ್ಧಾಂತಕ್ಕೆ 1930ರಲ್ಲಿ ಭೌತಶಾಸ್ತ್ರ ವಿಭಾಗದ ನೊಬೆಲ್ ಪಡೆದರು.
ರಾಮನ್ ಚದುರುವಿಕೆ ಪರಿಣಾಮ ಸಿದ್ಧಾಂತದ ಶೋಧನೆಯ ಹಾದಿ ಬಹಳ ಸ್ವಾರಸ್ಯಕರವೂ, ಕ್ಲಿಷ್ಟವೂ, ಶ್ರಮದಾಯಕವೂ ಆಗಿತ್ತು. ಅದೇನೇ ಇದ್ದರೂ, ರಾಮನ್ ಪರಿಣಾಮ ಸಿದ್ಧಾಂತವು ವಿಜ್ಞಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯಾಗಿದೆ.
ಇಂದು ಸರ್. ಸಿ.ವಿ. ರಾಮನ್ ಅವರ 132ನೇ ಹುಟುಹಬ್ಬ, 1888ರ ನವೆಂಬರ್ 7ರಂದು ತಮಿಳುನಾಡಿನ ತಿರುಚಿನಾಪಳ್ಳಿಯ ತಿರುವಣ್ನೈಕಾವಲ್ ನಲ್ಲಿ ಹುಟ್ಟಿದರೂ ಕರುನಾಡಿನಲ್ಲಿ ನೆಲೆಸಿದ್ದರು. ಕರ್ನಾಟಕವನ್ನು ವಿಶ್ವವಿಜ್ಞಾನ ಭೂಪಟದಲ್ಲಿ ಚಿತ್ರಿಸಿದ ಭೌತವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ. ಶಬ್ದ, ಬೆಳಕು, ಸ್ವರ, ನಾದಗಳಿಗೆ ವರ್ಣಮಯ ಬೆಳಕು ಚೆಲ್ಲಿದ ಧೀಮಂತ ಸಂಶೋಧಕ.
ರಾಮನ್‍ರ ತಂದೆ ಅಧ್ಯಾಪಕರಾಗಿದ್ದರು. ಆದರೆ, ಕುಟುಂಬ ದೊಡ್ಡದಾಗಿದ್ದರಿಂದ ಬಡತನದ ಸ್ಥಿತಿ ಇತ್ತು. ರಾಮನ್‍ಗೆ ಸಾಕಷ್ಟು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ಅನುಕೂಲ ಅವರಿಗಿರಲಿಲ್ಲ. ಆದರೆ, ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ರಾಮನ್ ಹದಿನಾರನೆ ವಯಸ್ಸಿನಲ್ಲೆ ಬಿಎ ಮುಗಿಸಿಕೊಂಡರು. ತರುವಾಯ ಎಂಎ ಪರೀಕ್ಷೆಯಲ್ಲಿ ಪಾಸಾಗಿ ಅರ್ಥಶಾಖೆಯ ಅಧಿಕಾರಿಯಾಗಿ ಸೇವೆಯಲ್ಲಿ ತೊಡಗಿದರು.
ವಿದ್ಯಾರ್ಥಿಯಾಗಿದ್ದಾಗ ವೈಜ್ಞಾನಿಕ ಪ್ರಯೋಗಗಳಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಅವರು ವೃತ್ತಿನಿರತರಾಗಿದ್ದಾಗಲೂ ಮುಂದುವರಿಸಿದರು.
ಡಾ.ರಾಮನ್ 6 ಮೇ 1907ರಲ್ಲಿ ಲೋಕಸುಂದರಿ ಅಮ್ಮಾಳ್ ಎಂಬಾಕೆಯನ್ನು ವಿವಾಹವಾದರು. ರಾಮನ್ ಲೋಕಸುಂದರಿ ಅಮ್ಮಾಳ್ ದಂಪತಿಗಳಿಗೆ ಚಂದ್ರಶೇಖರ್ ಮತ್ತು ರಾಧಾಕೃಷ್ಣನ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.
ರಾಮನ್ ಪರಿಣಾಮ ಎಂಬ ತತ್ವವು ವಿಜ್ಞಾನಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ.
ಸಿ.ವಿ.ರಾಮನ್‍ರ ಆಕಾಶದ ನೀಲಿ ಬಣ್ಣ ಸ್ಥಬ್ಧರನ್ನಾಗಿ ಮಾಡಿತ್ತು. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ರಾಮನ್‍ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತಾ ಅವರು ಬಹಳ ಸಮಯವನ್ನು ವ್ಯಯಿಸಿದರು. ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತಾ ಹಡಗಿನ ತುಂಬಾ ಓಡಾಡುತ್ತಿದ್ದರಂತೆ. ರಾಮನ್‍ರ ಸಹಪ್ರಯಾಣಿಕರು ಇಸ್ಪೀಟ್ ಬಿಂಗೋಗಳನ್ನು ಆಡುತ್ತಿದ್ದಾಗ ರಾಮನ್ ಒಂದು ಪ್ಯಾಕೆಟ್ ಸ್ಪೆಕ್ಟ್ರೋಮೀಟರ್ ನಲ್ಲಿ ಪ್ರಯೋಗಗಳನ್ನು ನಡೆಸುತ್ತಿದ್ದರು ಹಾಗೂ ವಿವಿಧ ಮಾಧ್ಯಮಗಳಲ್ಲಿ ಬೆಳಕು ಪಸರಿಸುವ ಬಗ್ಗೆ ಒಂದು ಲೇಖನವನ್ನು ಬರೆದರು.
ರಾಮನ್ ಇದೇ ವಿಷಯದ ಮೇಲೆ ಗಂಭೀರ ಸಂಶೋಧನೆ ಆರಂಭಿಸಿದರು. ವಿವಿಧ ರೀತಿಯ ದ್ರವಗಳ ಮೂಲಕ ಅವರು ಬೆಳಕಿನ ರಶ್ಮಿಗಳನ್ನು ಹಾಯಿಸಿ ಅವುಗಳ ಪರಿಣಾಮಗಳ ಅಧ್ಯಯನ ಮಾಡಿದರು.
ಒಂದೇ ಬಣ್ಣದ ಬೆಳಕನ್ನು ಒಂದು ದ್ರವದ ಮೂಲಕ ಹಾಯಿಸಿದಾಗ ಬೆಳಕಿನ ಆ ಭಾಗ ಹಾಗೂ ದ್ರವದ ಕಣಗಳು ಪರಸ್ಪರ ಕಲೆತು ಬೆಳಕನ್ನು ಚದುರಿಸುತ್ತದೆ. ಆಗ ಹೊರಸೂಸುವ ಬೆಳಕು ಮೂಲ ಕಿರಣಕ್ಕಿಂತ ಭಿನ್ನವಾದ ಬಣ್ಣವನ್ನೇ ಹೊಂದಿರುತ್ತದೆ. ಅದು ಪ್ರಾಸಂಗಿಕ ಬೆಳಕಿಗೆ ಸಂಬಂಧಿಸಿದಂತೆ ಶಕ್ತಿಯ ಹೆಚ್ಚಿನ ಹಾಗೂ ಕೆಳಗಿನ ಸ್ತರಗಳಿಗೆ ಮಾರ್ಪಡುತ್ತದೆ ಎಂಬುದನ್ನು ಕೊನೆಗೆ 1928ರಲ್ಲಿ ಸ್ಥಿರ ಪಡಿಸಿದರು.
ಇದೇ ಬಹು ಪ್ರಸಿದ್ಧವಾದ ಹಾಗೂ ನಂತರ ನೊಬೆಲ್ ಪಾರಿತೋಷಕ ತಂದುಕೊಟ್ಟ ರಾಮನ್ ಪರಿಣಾಮ.
ಇದು ಅನ್ವಯಿಕ ಉಪಯುಕ್ತತೆಯುಳ್ಳ ತತ್ವ.
ರಾಮನ್‍ರವರಿಗೆ ಮನ್ನಣೆ-ಗೌರವಗಳು ಬರುವುದಕ್ಕೆ ತಡವಾಗಲಿಲ್ಲ. ರಾಯಲ್ ಸೊಸೈಟಿಯಲ್ಲಿ ಸರ್ ಅರ್ನೆಸ್ಟ್ ರುಥರ್ಪೋರ್ಡ್ ರಾಮನ್ ಪರಿಣಾಮದ ಶೋಧ ಲೇಖನವನ್ನು ಪ್ರಕಟಿಸಿದರು ಹಾಗೂ ಬ್ರಿಟಿಷ್ ಸರ್ಕಾರ ರಾಮನ್‍ರವರಿಗೆ ನೈಟ್‍ಹುಡ್ ಪ್ರಶಸ್ತಿ ಪ್ರದಾನ ಮಾಡಿತು.
1930ರ ಡಿಸೆಂಬರ್ 31ರಂದು ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್ ಪಾರಿತೋಷಕ ಬಂದಿತು. ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯನ್ನರ ಹಾಗೂ ಬಿಳಿಯ ಜನಾಂಗದವರಲ್ಲಿ ಇವರೇ ಮೊದಲಿಗರು. ಇವರಿಗೂ ಮುಂಚೆ ರವೀಂದ್ರನಾಥ ಠಾಗೂರರು ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದಿದ್ದರು. ನಂತರ 1983ರಲ್ಲಿ ರಾಮನ್‍ರವರ ಸೋದರ ಅಳಿಯ ಸುಬ್ರಹ್ಮಣ್ಯನ್ ಚಂದ್ರಶೇಖರ್ ನೊಬೆಲ್ ಪ್ರಶಸ್ತಿ ಗಳಿಸಿದರು.
ತಮ್ಮ 12ನೆ ವಯಸ್ಸಿನಲ್ಲೇ ಮೆಟ್ರಿಕ್ಯುಲೇಷನ್ ಮುಗಿಸಿದರು. ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಎಸ್ಸಿ (1904) ಪದವಿ. ಎಂಎಸ್ಸಿ (1907) ಪದವಿಗಳನ್ನು ಗಳಿಸಿದರು. 1907ರಲ್ಲಿ ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೋಲ್ಕತ್ತದಲ್ಲಿ ಡೆಪ್ಯುಟಿ ಅಕೌಂಟೆಂಟ್ ಜನರಲ್ ಆಗಿ ವೃತ್ತಿ ಜೀವನ ಆರಂಭಿಸಿದರು. ವಿದ್ಯಾರ್ಥಿಯಾಗಿದ್ದಾಗ ವೈಜ್ಞಾನಿಕ ಪ್ರಯೋಗಗಳಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಅವರು ವೃತ್ತಿನಿರತರಾಗಿದ್ದಾಗಲೂ ಮುಂದುವರಿಸಿದರು.
1917ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಚಾರ್ಯರಾದರು. 1924ರಲ್ಲಿ ಲಂಡನ್ನಿನ ಫೆಲೋ ಆಫ್ ರಾಯಲ್ ಸೊಸೈಟಿಗೆ ರಾಮನ್ ಆಯ್ಕೆಯಾದರು. 16 ಮಾರ್ಚ್ 1928ರಲ್ಲಿ ತಮ್ಮ ಶೋಧನೆ ರಾಮನ್ ಎಫೆಕ್ಟ್‍ನ್ನು ಬೆಂಗಳೂರಿನಲ್ಲಿ ಬಹಿರಂಗಪಡಿಸಿದ ರಾಮನ್ 1930ರಲ್ಲಿ ಅದಕ್ಕಾಗಿ ನೊಬೆಲ್ ಪ್ರಶಸ್ತಿ ಗಳಿಸಿದರು. ಗೌರವ ಪ್ರಶಸ್ತಿಗಳು ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ (1924) ನೈಟ್ ಹುಡ್ ಪ್ರಶಸ್ತಿ (1929) ನೋಬೆಲ್ ಪ್ರಶಸ್ತಿ (1930) ಮೈಸೂರು ಮಹಾರಾಜರಿಂದ ರಾಜಸಭಾ ಭೂಷಣ ಗೌರವ (1935) ಭಾರತ ರತ್ನ ಪ್ರಶಸ್ತಿ (1954)ಗಳು ರಾಮನ್ ರಿಗೆ ದೊರೆತಿವೆ.
ರಾಮನ್ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಸ್ಥಾಪಕ ಸದಸ್ಯರಾಗಿದ್ದರು. ರಾಮನ್ ಸಂಗೀತ ವಾದ್ಯಗಳ ದ್ವತಿಗತಿ ವಿಜ್ಞಾನ ದ ಮೇಲೂ ಕೆಲಸ ಮಾಡಿದರು. ಅವರು ಅಧ್ಯಾರೋಪಣ ವೇಗದ ಆಧಾರದ ಮೇಲೆ ಕಮಾನು ತಂತಿಗಳ ಅಡ್ಡಕಂಪನಗಳ ಸಿದ್ಧಾಂತವನ್ನು ರೂಪಿಸಿದರು. ತಬಲ ಮತ್ತು ಮೃದಂಗ ಮುಂತಾದ ಭಾರತೀಯ ಚರ್ಮ ವಾದ್ಯಗಳ ಶಬ್ಧದ ಆವರ್ತಕ ಸ್ವರೂಪವನ್ನು ಕಂಡುಹಿಡಿದ ಮೊದಲಿಗರು.
1943ರಲ್ಲಿ ಟ್ರಾವಂಕೂರ್ ಕೆಮಿಕಲ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಲಿಮಿಟೆಡ್ ಎಂಬ ಕಂಪನಿಯನ್ನು ಆರಂಭಿಸಿದರು.
1934ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್‍ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಡಾ. ರಾಮನ್ ನಂತರ 1943ರಲ್ಲಿ ರಾಮನ್ ಸಂಶೋಧನಾ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ರಾಮನ್ ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು ರಾಮನ್ ರಿಸರ್ಚ್ ಇನ್ಸ್‍ಟಿಟ್ಯೂಟ್ ಎಂಬ ವಿಜ್ಞಾನ ಸಂಶೋಧನಾ ಸಂಸ್ಥೆಯನ್ನು ಅವರ ಜೀವಿತ ಕಾಲದಲ್ಲೇ ಸ್ಥಾಪಿಸಿ ಬಹಳಷ್ಟು ಸಂಶೋಧನೆಗಳನ್ನು ಮಾಡಿದರು.
ಭಾವಿ ಸಂಶೋಧಕರಿಗೆ ಬಿಟ್ಟು ಹೋಗಿರುವ ಈ ಸಂಸ್ಥೆ ವಿಶೇಷವಾಗಿ ಭೌತಶಾಸ್ತ್ರದ ಅತ್ಯಂತ ಪ್ರಮುಖ ಸಂಶೋಧನ ಸಂಸ್ಥೆಯಾಗಿದೆ. ಶಬ್ದ ಮತ್ತು ಬೆಳಕಿನ ವಿಶೇಷ ಸಂಶೋಧನೆ ಮಾಡಿದ ಚಂದ್ರಶೇಖರ್ ವೆಂಕಟರಾಮನ್ 21 ನವೆಂಬರ್ 1970ರಂದು ನಿಧನರಾದರು.
1930ರ ಡಿಸೆಂಬರ್ 31ರಂದು ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್ ಪಾರಿತೋಷಕ ಬಂದಿತು. ವಿಜ್ಞಾನ ದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯನ್ನರ ಹಾಗೂ ಬಿಳಿಯ ಜನಾಂಗದವರಲ್ಲಿ ಇವರೇ ಮೊದಲಿಗರು.
82 ವರ್ಷಗಳ ತುಂಬು ಜೀವನ ನಡೆಸಿದ ರಾಮನ್ ಕೊನೆಯುಸಿರೆಳೆದದ್ದೂ ನವೆಂಬರ್ ತಿಂಗಳಿನಲ್ಲೇ ಎಂಬುದು ವಿಶೇಷ. ಭೌತವಿಜ್ಞಾನಕ್ಕೆ ಅಭೂತಪೂರ್ವ ಕಾಣಿಕೆ ಇತ್ತ ಅವರು, ಭೌತಿಕ ಶರೀರ ತೊರೆದದ್ದು, 1970ರ ನವೆಂಬರ್ 21ರಂದು. ಹುಟ್ಟು – ಸಾವುಗಳೆರಡನ್ನೂ ನವೆಂಬರ್‍ನಲ್ಲೇ ಕಂಡರು.
ಭೌತವಿಜ್ಞಾನದಲ್ಲಿ ‘ಎಫೆಕ್ಟ್’ ತೋರಿದ ಸಿ.ವಿ.ರಾಮನ್

