ಶ್ರೀನಗರ: ಭಾರತೀಯ ಯೋಧರು ಮತ್ತು ಭಯೋತ್ಪಾದಕರ ನಡುವೆ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಮೂರು ಮಂದಿ ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ.
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚಿಲ್ ವಲಯದಲ್ಲಿನ ನಿಯಂತ್ರಣ ರೇಖೆ ಬಳಿ ಭಾನುವಾರ ಮುಂಜಾನೆ 1 ಗಂಟೆಗೆ ಭದ್ರತಾ ಪಡೆಗಳು ಅಪರಿಚಿತ ವ್ಯಕ್ತಿಗಳ ಅನುಮಾನಾಸ್ಪದ ಚಲನೆಯನ್ನು ಗಮನಿಸಿವೆ.
ಶರಣಾಗುವಂತೆ ಭದ್ರತಾ ಪಡೆಗಳು ಸೂಚಿಸಿದರೂ ಒಳನುಸುಳುಕೋರರು ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಗುಂಡಿನ ಚಕಮಕಿ ನಡೆದು, ಘಟನೆಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. ಇದೇ ವೇಳೆ ಬಿಎಸ್‍ಎಫ್ ಪೇದೆ ಸುದೀಪ್ ಸರ್ಕಾರ್ ಹುತಾತ್ಮರಾಗಿದ್ದಾರೆ.
ಈ ವೇಳೆ ಸ್ಥಳಕ್ಕೆ ಹೆಚ್ಚುವರಿ ಯೋಧರು ಬಂದಿದ್ದು, ಕಾರ್ಯಚರಣೆ ಮಾಡಿದ್ದಾರೆ. ಆದರೆ ಬೆಳಗ್ಗೆ 10 ಗಂಟೆಗೆ ಮತ್ತೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ. ಈ ಸಮಯದಲ್ಲಿ ಓರ್ವ ಆರ್ಮಿ ಆಫೀಸರ್ ಸೇರಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ; ಮೂವರು ಉಗ್ರರ ಹತ್ಯೆ

