ಉಪ ಚುನಾವಣೆ: ಗುಜರಾತ್, ಮಧ್ಯ ಪ್ರದೇಶ, ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ

ನವದೆಹಲಿ: ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ದೇಶದ 10 ರಾಜ್ಯಗಳ ಒಟ್ಟು 54 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿದ್ದ ಮತದಾನದ ಫಲಿತಾಂಶ ಮಂಗಳವಾರ ಪ್ರಕಟವಾಗುತ್ತಿದೆ.
ಗುಜರಾತ್, ಮಧ್ಯ ಪ್ರದೇಶ, ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಹರ್ಯಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಗುಜರಾತ್ ನ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಪಕ್ಷ ಒಂದು ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.
ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ 28 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 2 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಕರ್ನಾಟಕದ ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಮುನಿರತ್ನ ಮತ್ತು ಸಿಎಂ ರಾಜೇಶ್ ಗೌಡ ಮುನ್ನಡೆ ಸಾಧಿಸಿದ್ದಾರೆ.
ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ಅವರು ಮುನ್ನಡೆ ಸಾಧಿಸಿದ್ದು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಹಿನ್ನಡೆ ಸಾಧಿಸಿದ್ದಾರೆ. ಇತ್ತ ಶಿರಾದಲ್ಲೂ ಬಿಜೆಪಿ ಅಭ್ಯರ್ಥಿ ಸಿಎಂ ರಾಜೇಶ್ ಗೌಡ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಮತ್ತು ಜೆಡಿಎಸ್ ಅಮ್ಮಾಜಮ್ಮ ಹಿನ್ನಡೆಯಲ್ಲಿದ್ದಾರೆ.
ಒಡಿಶಾ, ಜಾರ್ಖಂಡ್ ನಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. ಹರ್ಯಾಣ ಕಾಂಗ್ರೆಸ್, ಛತ್ತೀಸ್ ಘಡದ ಮಾರ್ಹಾವಿಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ನಾಗಾಲ್ಯಾಂಡ್ ನ ದಕ್ಷಿಣ ಅಂಗಾಮಿ ಮತ್ತು ಪುಂಗ್ರೊ ಕಿಫೈರ್ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.