ಬೆಂಗಳೂರು: ಇದೇ ನ. 19ರಿಂದ ನಡೆಯಲಿರುವ ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ (ಬಿಟಿಎಸ್)ಯಲ್ಲಿ ಮಹತ್ವದ 12 ಒಪ್ಪಂದಗಳಿಗೆ ಜಾಗತಿಕ ಆವಿಷ್ಕಾರ ಮೈತ್ರಿಕೂಟದ ಪಾಲುದಾರ ದೇಶಗಳ ಜತೆ ಸಹಿ ಹಾಕಲಾಗುವುದು ಎಂದು ಐಟಿ-ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.
ತಂತ್ರಜ್ಞಾನ ಶೃಂಗಸಭೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸೋಮವಾರ ವಿವಿಧ ದೇಶಗಳ ಉನ್ನತ ರಾಜತಾಂತ್ರಿಕ ಅಧಿಕಾರಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೋವಿಡ್-19 ನಡುವೆಯೂ ನಡೆಯುತ್ತಿರುವ ಅತಿದೊಡ್ಡ ಪ್ರಮಾಣದ ಈ ಶೃಂಗದಲ್ಲಿ ಸುಮಾರು 25ಕ್ಕೂ ಹೆಚ್ಚು ದೇಶಗಳು ಭಾಗಿಯಾಗುತ್ತಿದ್ದು, ತಂತ್ರಜ್ಞಾನದ ಅನೇಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಪ್ಪಂದಗಳು ಆಗಲಿವೆ. ಈ ಪೈಕಿ ಏಳು ಒಪ್ಪಂದಗಳು ಸಹಿಗೂ ಸಿದ್ಧವಾಗಿವೆ ಎಂದರು.
ಈ ಹಿಂದೆ ಮಾಡಿಕೊಂಡಿರುವ ಒಪ್ಪಂದಗಳ ಅನುಷ್ಠಾನಕ್ಕೆ ಇನ್ನಷ್ಟು ವೇಗ ನೀಡಲಾಗುವುದು. ಹೊಸ ಒಪ್ಪಂದಗಳನ್ನು ಕಾಲಮಿತಿಯೊಳಗೆ, ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು ಎಂದು ಡಿಸಿಎಂ ತಿಳಿಸಿದರು.
ಕೃಷಿ, ಸಂಶೋಧನೆ, ಅಭಿವೃದ್ಧಿ, ಸ್ಟಾರ್ಟ್ ಅಪ್ಯ್ ಗಳ ಸ್ಥಾಪನೆ ಪಾಲುದಾರಿಕೆ ಸೇರಿದಂತೆ ಏಳು ಮಹತ್ವದ ಹೊಸ ಒಪ್ಪಂದಗಳಿಗೆ ಶೃಂಗಸಭೆಯಲ್ಲಿ ಸಹಿ ಬೀಳಲಿದೆ ಎಂದ ಅವರು, ಜಾಗತಿಕ ಮಟ್ಟದ ಆವಿಷ್ಕಾರ ಮೈತ್ರಿಗೆ ಸಂಬಂಧಿಸಿದ ವಿಚಾರ ವಿನಿಮಯ- ಚರ್ಚೆಯ ಜತೆಗೆ 15 ಅಧಿವೇಶನಗಳು ನಡೆಯುತ್ತಿವೆ. 60ಕ್ಕೂ ಹೆಚ್ಚು ಜನ ಈ ಬಗ್ಗೆ ತಮ್ಮ ಆಭಿಪ್ರಾಯವನ್ನು ಮಂಡಿಸಲಿದ್ದಾರೆ. ವಿವಿಧ ದೇಶಗಳ ಸಚಿವರ ಮಟ್ಟದ ಹತ್ತು ನಿಯೋಗಗಳು ಭಾಗಿಯಾಗಲಿದೆ. ಇದರ ಜತೆಗೆ 500ಕ್ಕೂ ಹೆಚ್ಚು ಅಂರಾತಾಷ್ಟ್ರೀಯ ಮಟ್ಟದ ನಿಯೋಗಗಳು ಭೇಟಿ ನೀಡುತ್ತಿವೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಇಸ್ರೇಲ್, ನೆದರ್‍ಲ್ಯಾಂಡ್, ಸ್ವಿಡ್ಜರ್‍ಲೆಂಡ್, ಇಂಗ್ಲೆಂಡ್ ತಂತ್ರಜ್ಞಾನ ಶೃಂಗಸಭೆಯ ಪಾಲುದಾರ ದೇಶಗಳಾಗಿದ್ದು, ಮುಖ್ಯವಾಗಿ ಈ ರಾಷ್ಟ್ರಗಳಿಂದ ಕರ್ನಾಟಕ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯನ್ನು ನಿರೀಕ್ಷೆ ಮಾಡುತ್ತಿದೆ ಎಂದವರು ತಿಳಿಸಿದರು.
ಇದೇ ಮಾಧ್ಯಮ ಗೋಷ್ಠಿಯಲ್ಲಿ ಬ್ರಿಟನ್, ಆಸ್ಟ್ರೇಲಿಯಾ, ನೆದರ್‍ಲ್ಯಾಂಡ್, ಸ್ವೀಡನ್, ಫ್ರಾನ್ಸ್, ಇಸ್ರೇಲ್, ಜಪಾನ್, ಜರ್ಮನಿ ದೇಶಗಳ ಉನ್ನತ ರಾಜತಾಂತ್ರಿಕ ಅಧಿಕಾರಿಗಳು ವರ್ಚುವಲ್ ಮೂಲಕ ಮಾತನಾಡಿದರು.

