ವಿದೇಶದಲ್ಲಿ ಕಲಿಯಿರಿ; ಇಲ್ಲಿನ ಜನತೆ ಸೇವೆ ಮಾಡಿ -ಡಾ.ಕೆ.ಸುಧಾಕರ್

ಮೈಸೂರು: ಹೆಚ್ಚು ಹೆಚ್ಚು ಕಲಿಯಿರಿ, ವಿದೇಶಕ್ಕೆ ಹೋಗಿ ಬೇಕಾದರೂ ಕಲಿಯಿರಿ ಆದರೆ ಮರಳಿ ಬಂದು ಇಲ್ಲಿನ ಜನತೆಗೆ ಸೇವೆ ನೀಡುವುದನ್ನು ಮಾತ್ರ ಮರೆಯದಿರಿ ಎಂದು ವೈದ್ಯರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕರೆಯಿತ್ತರು.
ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಬುಧವಾರ ನಡೆದ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಡಾ. ಸುಧಾಕರ್ ಘಟಿಕೋತ್ಸವ ಭಾಷಣ ಮಾಡಿದರು.
ಜೆಎಸ್ ಎಸ್ ಶ್ರೇಷ್ಠ ಶಿಕ್ಷಣ ಸಂಸ್ಥೆ. ಇಲ್ಲಿ ನೀವು ಕಲಿತಿದ್ದೀರಿ, ಸ್ಪೂರ್ತಿಯ ಸೆಲೆ ಇಲ್ಲಿದೆ. ಆ ಸ್ಫೂರ್ತಿಯನ್ನು ನಿಮ್ಮ ಜೊತೆ ಒಯ್ಯಿರಿ ಎಂದು ತಿಳಿಸಿದರು.
ಸಾರ್ವಜನಿಕರ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಸಮುದಾಯವನ್ನು ಶಿಕ್ಷಣಭರಿತವಾಗಿ ಮಾಡಿ ಅವರಿಗೆ ಜೀವನ ಶೈಲಿಯ ಕುರಿತು ಅರಿವು ಮೂಡಿಸಬೇಕು ಎಂದರು.
ಕರ್ನಾಟಕ ಕೋವಿಡ್ ನಿಯಂತ್ರಿಸುವಲ್ಲಿ ಸಾಧನೆಗೈದಿದೆ ಎಂದು ಡಾ. ಸುಧಾಕರ್ ಹೇಳಿ, ಕೋವಿಡ್ ನಿಯಂತ್ರಣಕ್ಕೆ ಜೆಎಸ್ ಎಸ್ ಸಂಸ್ಥೆ ಸರ್ಕಾರದ ಜೊತೆ ಸಹಾಯಕ್ಕೆ ನಿಂತಿತ್ತು ಎಂದು ಶ್ಲಾಘಿಸಿದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ಅವರ ಸಾನಿಧ್ಯದಲ್ಲಿ ಪದವಿ ಪ್ರದಾನ ಮಾಡಲಾಯಿತು. ಶ್ರೀಗಳು ಪ್ರತಿಜ್ಞಾವಿಧಿ ಬೋಧಿಸಿದರು.
ಒಟ್ಟು 1436 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 52 ವಿದ್ಯಾರ್ಥಿಗಳಿಗೆ ಪದಕ, 42 ವಿದ್ಯಾರ್ಥಿಗಳಿಗೆ ಪಿಹೆಚ್‍ಡಿ, 5 ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಪದವಿ ವಿತರಿಸಲಾಯಿತು.
ಡಾ. ಸಿದ್ದಾರ್ಥ ಸುಬ್ರಹ್ಮಣ್ಯಂ ಜೋಶಿ, ಡಾ. ಕೃಷ್ಣಕುಮಾರ್, ಡಾ. ಅಶ್ವತಿ ಕೆ. ಡಾ. ವಿನುತಾ, ಡಾ. ಸ್ಫೂರ್ತಿರಾಜ್, ಡಾ. ಡಿ ಹೆಚ್. ಪ್ರವೀಣ್, ಡಾ. ಅನು ಜಾರ್ಜ್, ಡಾ. ಅಭಿಮನ್ಯು ಚಂದಕ್, ಡಾ. ಸಿ. ಮಯೂರ್, ಡಾ. ಪೂಜಾ ಸೇರಿದಂತೆ ಹಲವರು ಪದಕ ಪಡೆದರು.
ಘಟಿಕೋತ್ಸವ ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬೆಠಸೂರು ಮಠ್, ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಪತಿ ಸುರೀಂದರ್ ಸಿಂಗ್ ಉಪಸ್ಥಿತರಿದ್ದರು.
ವರ್ಚುವಲ್ ಲೈವ್ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.