ಎಂಎಂಸಿ ಆಡಳಿತದಲ್ಲಿನ ಲೋಪಗಳಿಗೆ ಸಚಿವ ಸುಧಾಕರ್ ಕೆಂಡಾಮಂಡಲ

ಮೈಸೂರು: ಮೈಸೂರು ಮೆಡಿಕಲ್ ಕಾಲೇಜು ಆಡಳಿತದಲ್ಲಿ ಕಂಡುಬಂದ ನ್ಯೂನತೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.
ಹೊರಗುತ್ತಿಗೆ ವಿಷಯದಲ್ಲಿ ಲೋಪಗಳನ್ನು ಸರಿಪಡಿಸಲು ಮೆಡಿಕಲ್ ಕಾಲೇಜು, ಕೆಆರ್ ಆಸ್ಪತ್ರೆ, ಚೆಲುವಾಂಬ ಮತ್ತು ಪಿಕೆ ಸ್ಯಾನಿಟೋರಿಯಂಗಳಿಗೆ ಒಂದೇ ಗುತ್ತಿಗೆ ನೀಡಬೇಕು, ಪ್ರತ್ಯೇಕವಾಗಿ ನೀಡಿರುವುದನ್ನು ತಕ್ಷಣ ರದ್ದುಮಾಡಬೇಕು ಎಂದು ಸಚಿವರು ಆದೇಶಿಸಿದರು.
ಗುಣಮಟ್ಟ ಹಾಗೂ ಪಾರದರ್ಶಕತೆಗೆ ಒತ್ತು ನೀಡಬೇಕು. ಒಂದು ವೇಳೆ ಕಾನೂನಿನ ತೊಡಕು ಎದುರಾದರೆ ಸರ್ಕಾರಕ್ಕೆ ವರದಿ ಸಲ್ಲಿಸಿ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಬುಧವಾರ ಕಾಲೇಜಿಗೆ ಭೇಟಿ ನೀಡಿ ಶೈಕ್ಷಣಿಕ ಹಾಗೂ ಆಡಳಿತದ ಪ್ರಗತಿ ಪರಿಶೀಲನೆ ನಡೆಸಿ ಸೂಚನೆ ನೀಡಿದರು.
ಸಂಶೋಧನೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟವಾದ ಸಂಶೋಧನಾ ಲೇಖನಗಳ ಮಾಹಿತಿ ನೀಡಲು ಪರದಾಡಿದ ಡೀನ್ ನಾಗರಾಜು ಅವರನ್ನು ತರಾಟೆಗೆ ತೆಗೆದುಕೊಂಡರು. ಜವಾಬ್ದಾರಿ ಹುದ್ದೆಯಲ್ಲಿ ಇರುವವರು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದಿದ್ದರೆ ಆ ಹುದ್ದೆಯಲ್ಲಿ ಇರಬಾರದು. ಇನ್ನು ಮುಂದೆ ಲೋಪಗಳಿಗೆ ಅವಕಾಶ ನೀಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಟ್ಟಡ ನಿರ್ವಹಣೆಗೆ ಇರುವ ಹಣದ ಬಳಕೆ ಮಾಡದೇ ಮೂರು ವರ್ಷದಿಂದ ಕಾಲಾಹರಣ ಮಾಡುತ್ತಿರುವುದನ್ನು ಕಂಡು ಕೆಂಡಾಮಂಡಲರಾದ ಸಚಿವರು, ತಕ್ಷಣ ಆದ್ಯತೆ ಮೇರೆಗೆ ಆಗಬೇಕಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸೂಚನೆ ನೀಡಿದರು.
ಜನರಿಕ್ ಔಷಧಿ ಮಳಿಗೆ ತಕ್ಷಣ ಆರಂಭಿಸಬೇಕು, ಹೊರಗಿನಿಂದ ಖರೀದಿಗೆ ಚೀಟಿ ಕೊಡುವ ಪರಿಪಾಠ ನಿಲ್ಲಬೇಕು. ಕೆಲ ದಿನಗಳಲ್ಲಿ ಸರಕಾರಿ ಔಷಧ ಮಳಿಗೆಗಳಲ್ಲಿ ಖಾಸಗಿ ಕಂಪನಿಗಳ ಔಷಧಗಳನ್ನು ಮಾರಾಟ ಮಾಡುವಂತಿಲ್ಲ ಹಾಗೂ ಇಂತಿಷ್ಟು ವ್ಯಾಪ್ತಿಯಲ್ಲಿ ಖಾಸಗಿ ಮಳಿಗೆ ತೆರೆಯುವಂತಿಲ್ಲ ಎಂದೂ ಕಾನೂನು ಜಾರಿಗೊಳಿಸಲಾಗುವುದು ಎಂದರು.
ಸಭೆಯಲ್ಲಿ ಶಾಸಕ ನಾಗೇಂದ್ರ ಹಾಜರಿದ್ದರು.