ಕೇಂದ್ರದಿಂದ ಇನ್ನೂ ಹೆಚ್ಚಿನ ಪರಿಹಾರಕ್ಕೆ ಪ್ರಯತ್ನಿಸುತ್ತೇವೆ -ಸಿಎಂ ಬಿಎಸ್ ವೈ

ಬೆಂಗಳೂರು: ಕೇಂದ್ರದಿಂದ ಇನ್ನೂ ಹೆಚ್ಚಿನ ನೆರೆ ಪರಿಹಾರಕ್ಕೆ ಪ್ರಯತ್ನಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದರು.
ಜವಾಹರಲಾಲ ನೆಹರು ಅವರ 131ನೇ ಜನ್ಮದಿನ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ನೆಹರು ಪ್ರತಿಮೆಗೆ ಸಿಎಂ ಬಿಎಸ್ ವೈ ಶನಿವಾರ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಾಡಿದರು.
ಕೇಂದ್ರ ನೀಡಿದ ಎನ್ ಡಿ ಆರ್ ಎಫ್ ಪರಿಹಾರ ಕಡಿಮೆ ಆಯಿತು ಎನ್ನುವ ಮಾತು ಕೇಳಿ ಬಂದಿದೆ. ಆದರೆ ಕೇಂದ್ರದಿಂದ ನಿನ್ನೆ ಕೊಟ್ಟಿದ್ದು ಮೊದಲ ಕಂತು ಎಂದು ನಾವು ಭಾವಿಸುತ್ತೇವೆ. ಇನ್ನೂ ಹೆಚ್ಚಿನ ಪರಿಹಾರಕ್ಕೆ ಪ್ರಯತ್ನ ಪಡುತ್ತೇವೆ. ಇನ್ನಷ್ಟು ಪರಿಹಾರ ಬರುವ ವಿಶ್ವಾಸ ಇದೆ ಎಂದು ಸಿಎಂ ಹೇಳಿದರು.
ನೆಹರು ಅವರು ದೇಶದ ಅಭಿವೃದ್ಧಿಯ ಹರಿಕಾರ. ಅವರ ಜನ್ಮದಿನದಂದು ಅವರನ್ನ ಗೌರವಪೂರ್ವಕವಾಗಿ ನೆನೆಪಿಸಿಕೊಳ್ಳೋಣ, ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ತಿಳಿಸಿದರು.
ರಾಜ್ಯದಲ್ಲಿ ಈ ವರ್ಷ ಮಳೆಯಿಂದ ಪ್ರವಾಹ ಬಂದು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಬೆಳೆ ನಷ್ಟ ಉಂಟಾಗಿತ್ತು. ಕೇಂದ್ರ ಸರ್ಕಾರ 577 ಕೋಟಿ ರೂಪಾಯಿ ನೆರೆ ಪರಿಹಾರ ನಿಧಿ ಬಿಡುಗಡೆ ಮಾಡಿತ್ತು. ಕೇಂದ್ರ ಸರ್ಕಾರದ ಈ ಹಣ ಕಡಿಮೆ ಎನ್ನುವ ಆರೋಪ ಕೇಳಿ ಬಂದಿತ್ತು.