ಬೆಂಗಳೂರು: ನಾಗರಿಕರಿಗೆ ಸ್ಪಂದಿಸಿ ಆರ್ಥಿಕ ಬಲ ತುಂಬುವುದೇ ನಮ್ಮ ಗುರಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.
ನಗರದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶನಿವಾರ ಆಯೋಜಿಸಲಾಗಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020ರ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.
ಭಾರತದಲ್ಲಿ ಸಹಕಾರಿಗಳು ನಿಷ್ಠೆಯಿಂದ ಪ್ರತಿವರ್ಷ ಸಪ್ತಾಹವನ್ನು ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿ ಸಪ್ತಾಹದ ಧ್ಯೇಯ ಕೊರೋನ ಸೋಂಕು – ಆತ್ಮನಿರ್ಭರ ಭಾರತ – ಸಹಕಾರ ಸಂಸ್ಥೆಗಳು ಎಂಬುದಾಗಿದೆ ಎಂದರು.
ಮುಖ್ಯಮಂತ್ರಿಗಳ ಕೋವಿಡ್-19ರಪರಿಹಾರ ನಿಧಿಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಮುಂದಾಳತ್ವದಲ್ಲಿ 53 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ದೇಣಿಗೆಯಾಗಿ ನೀಡಿರುವುದಕ್ಕೆ ನಾನು ವೈಯಕ್ತಿಕವಾಗಿ ಮತ್ತು ಸರ್ಕಾರದ ಪರವಾಗಿ ಅಭಿನಂದಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೋವಿಡ್-19ರ ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ಕೃಷಿ ಸಾಲ ಒದಗಿಸಲು ಕೇಂದ್ರ ಸರ್ಕಾರವು 1700 ಕೋಟಿ ರೂ.ಗಳನ್ನು ನಬಾರ್ಡ್ ಮೂಲಕ ಡಿಸಿಸಿ ಬ್ಯಾಂಕುಗಳಿಗೆ ನೀಡಲಾಗಿದ್ದು, ರೈತರ ಸಂಕಷ್ಟದ ಸಮಯದಲ್ಲಿ ಕೃಷಿಗೆ ಅವಶ್ಯಕವಾದ ಸಾಲವನ್ನು ಒದಗಿಸಲಾಗಿದೆ ಎಂದರು.
ಆತ್ಮನಿರ್ಭರ ಪ್ಯಾಕೇಜ್‍ಅಡಿಯಲ್ಲಿ ರೂ.4525 ಕೋಟಿಗಳ ಮೊತ್ತವನ್ನು ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಈ ಸಂದರ್ಭದಲ್ಲಿ ಸಹಕಾರ ಇಲಾಖೆಯ ಮಹಾಮಂಡಳದ ಕಾರ್ಯಚಟುವಟಿಕೆಗಳ ಕೈಪಿಡಿಯನ್ನು ಕಂದಾಯ ಸಚಿವ ಆರ್.ಅಶೋಕ್ ಅವರು ಹಾಗೂ ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆಯನ್ನು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಬಿಡುಗಡೆಗೊಳಿಸಿದರು.
ಇದೇ ವೇಳೆ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳು ಪ್ರದಾನ ಮಾಡಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಹಕಾರ ಸಂಘಗಳ ನಿಂಬಂಧಕ ಎಸ್. ಜಿಯಾಉಲ್ಲಾ ಸೇರಿದಂತೆ ಹಿರಿಯ ಸಹಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

