ನಮ್ಮ ತಾಳ್ಮೆ ಪರೀಕ್ಷಿಸಿದರೆ ಪ್ರತ್ಯುತ್ತರ ನೀಡುತ್ತೇವೆ -ಪ್ರಧಾನಿ ಮೋದಿ

ಜೈಸಲ್ಮೇರ್: ನಮ್ಮ ತಾಳ್ಮೆಯನ್ನು ಪರೀಕ್ಷಿಸಿದರೆ ನಾವು ದಿಟ್ಟ ಪ್ರತ್ಯುತ್ತರ ನೀಡುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆ ನೀಡಿದರು.
ರಾಜಸ್ಥಾನದ ಜೈಸಲ್ಮೇರ್ ಲೋಂಗೇವಾಲ್ ಪೆÇೀಸ್ಟ್‍ನಲ್ಲಿ ಭಾರತೀಯ ಸೇನಾ ಪಡೆಯೊಂದಿಗೆ ಶನಿವಾರ ದೀಪಾವಳಿ ಆಚರಿಸಿ ಯೋಧರಿಗೆ ಉಡುಗೊರೆ ನೀಡಿ ಸಿಹಿ ತಿನ್ನಿಸಿ ಪ್ರಧಾನಿ ಮೋದಿ ಮಾತನಾಡಿದರು.
ನಮ್ಮ ಗಡಿಗಳ ರಕ್ಷಣೆಯಿಂದ ನಮ್ಮ ಸೇನಾ ಪಡೆಗಳನ್ನು ತಡೆಯಲು ಜಗತ್ತಿನ ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಮೋದಿ ಹೇಳಿದರು.
ನಮಗೆ ಇತರರೊಂದಿಗೆ ಸಹನೆ, ಸಂಯಮದಿಂದ ಹೊಂದಾಣಿಕೆ ಮಾಡಿಕೊಳ್ಳುವ ನೀತಿಯಲ್ಲಿ ನಂಬಿಕೆ ಇದೆ ಎಂದು ಮೋದಿ ಹೇಳಿ ನಮ್ಮ ವೀರ ಯೋಧರ ಬಗ್ಗೆ ಭಾರತೀಯರಿಗೆ ಹೆಮ್ಮೆ ಇದೆ ಎಂದರು.
ಮುಂದಿನ ವರ್ಷ ಇಂಡೋ-ಪಾಕ್ ಯುದ್ಧಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಲೋಂಗೇವಾಲ್ ಗಡಿಯಲ್ಲಿ ಪಾಕ್ ಸೇನೆಯನ್ನು ಮಣಿಸಿದ ನಮ್ಮ ಯೋಧರ ಸಾಹಸ ಸ್ಮರಣೀಯ ಎಂದು ಮೋದಿ ಗುಣಗಾನ ಮಾಡಿದರು.
ನಮ್ಮ ಹಿತಾಸಕ್ತಿ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ ಅದಕ್ಕೆ ನಾವು ಅಗಾಧ ಬಲ ಮತ್ತು ರಾಜಕೀಯ ಇಚ್ಚಾಶಕ್ತಿಯಿಂದ ವೈರಿಗಳಿಗೆ ತಕ್ಕ ಶಾಸ್ತಿ ಮಾಡಿದ್ದೇವೆ ಎಂದು ಪ್ರಧಾನಿ ಹೇಳಿದರು.