ಸಮಾಜ ಒಡೆವ ಕೆಲಸ ಮಾಡೋದು ಬೇಡ -ಡಿ.ಕೆ ಶಿವಕುಮಾರ್

ಬೆಂಗಳೂರು: ಸರ್ಕಾರ ರಾಜ್ಯದ ಎಲ್ಲ ಜನರಿಗೂ ಒಳ್ಳೆಯ ಕೆಲಸ ಮಾಡಲಿ. ಆದರೆ ಜಾತಿ, ಸಮುದಾಯದ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದಲ್ಲಿ ಸೋಮವಾರ ಡಿಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಇಷ್ಟು ದಿನ ನಾವು ಎಲ್ಲರನ್ನೂ ಸಮಾನವಾಗಿ ನೋಡುತ್ತಿರಲಿಲ್ಲವೇ? ರಾಜ್ಯ ಸರ್ಕಾರಕ್ಕೆ ಇಷ್ಟು ದಿನ ಮರಾಠರ ಬಗ್ಗೆ ಕಾಳಜಿ ಇರಲಿಲ್ಲವೇ? ಎಂದು ಅವರು ಪ್ರಶ್ನಿಸಿ, ಮರಾಠರು ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಸಮುದಾಯದವರ ಏಳಿಗೆಗೆ ಹಾಗೂ ಜನರಿಗೆ ಒಳ್ಳೆಯದು ಮಾಡಿದರೆ ನಾವು ಬೆಂಬಲ ನೀಡುತ್ತೇವೆ. ಆದರೆ ಅದರ ಹಿಂದೆ ಸಮಾಜವನ್ನು ವಿಭಜಿಸುವ ಉದ್ದೇಶ ಇರುವುದು ಸರಿಯಲ್ಲ ಎಂದು ಡಿಕೆಶಿ ಹೇಳಿದರು.
ಬಿಜೆಪಿ ಮೊದಲಿನಿಂದಲೂ ಸಮಾಜ ಒಡೆಯುವ ಕೆಲಸವನ್ನೇ ಮಾಡಿಕೊಂಡು ಬರುತ್ತಿದೆ. ಮರಾಠಿಗರನ್ನು ಪ್ರತ್ಯೇಕವಾಗಿ ನೋಡುವ ಅಗತ್ಯ ಏನಿದೆ? ಎಂದು ಡಿಕೆಶಿ ಪ್ರಶ್ನಿಸಿದರು.
ಪ್ರಶ್ನೆಯೊಂದಕ್ಕೆ ಡಿಕೆಶಿ ಉತ್ತರಿಸಿ, ಈ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದು, ಸದ್ಯ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ರಾಜ್ಯ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದರೂ ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿಲ್ಲ. ಚುನಾವಣೆ ಎದುರಾದ ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳು ಕೇಂದ್ರ ಸರ್ಕಾರದ ಆದ್ಯತೆಯೇ ಹೊರತು ಕರ್ನಾಟಕ ರಾಜ್ಯವಲ್ಲ ಎಂದರು.
ರಾಜ್ಯ ಸಭೆಯ ಒಂದು ಸದಸ್ಯ ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುತ್ತೇವೆ. ಇದು ಬಿಜೆಪಿ ಅವರ ಚುನಾವಣೆ. ಇಲ್ಲಿ ಬಹಿರಂಗ ಮತದಾನ ನಡೆಯುತ್ತದೆ. ನಮ್ಮ ಬಳಿ ಎಷ್ಟು ಸಂಖ್ಯೆ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಅಭ್ಯರ್ಥಿ ನಿಲ್ಲಿಸಬೇಕೆ, ಬೇಡವೇ ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆಯೋ ಇಲ್ಲವೋ ಎಂಬುದು ಅವರಿಗೆ ಬಿಟ್ಟದ್ದು. ಬೇರೆ ಪಕ್ಷದಿಂದ ಅಧಿಕೃತ ತೀರ್ಮಾನ ಬರುವವರೆಗೂ ನಾನು ಮಾತನಾಡುವುದು ಸೂಕ್ತ ಅಲ್ಲ. ಅವರ ರಾಜಕೀಯ ಲಾಭ, ತಂತ್ರಗಾರಿಕೆ ಅವರಿಗೆ ಬಿಟ್ಟ ವಿಚಾರ. ಅದನ್ನು ನಾವು ಪ್ರಶ್ನೆ ಮಾಡುವುದಿಲ್ಲ ಎಂದು ಶಿವಕುಮಾರ್ ಹೇಳಿದರು.