ಹೋಮಿಯೋಪತಿಯಲ್ಲಿ ಹೆಚ್ಚು ಸಂಶೋಧನೆ ನಡೆಯಬೇಕು -ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಹೋಮಿಯೋಪತಿ ವೈದ್ಯ ಪದ್ಧತಿಯಲ್ಲಿ ಹೆಚ್ಚು ಸಂಶೋಧನೆ, ಅಧ್ಯಯನಗಳನ್ನು ನಡೆಸಿ ಅದನ್ನು ದಾಖಲಾಗಿಸಬೇಕು. ಈ ಮೂಲಕ ಈ ವೈದ್ಯ ಪದ್ಧತಿಯ ಮಹತ್ವವನ್ನು ಜನರಿಗೆ ತಿಳಿಸಿಕೊಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕೆಎಚ್ ಬಿ ಕಾಲೋನಿಯಲ್ಲಿ ಕರ್ನಾಟಕ ಹೋಮಿಯೋಪತಿ ಮಂಡಳಿಯ ನೂತನ ಆಡಳಿತ ಕಚೇರಿ ಹೋಮಿಯೋ ಭವನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಕೋವಿಡ್ ಸಮಯದಲ್ಲಿ ಬಹಳ ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸರ್ಕಾರಿ ಹೋಮಿಯೋಪತಿ ಆಸ್ಪತ್ರೆಗಳಿಗೆ ಹೋಗಿ ಔಷಧಿ ಪಡೆದಿದ್ದಾರೆ. ಈ ರೀತಿ ಜನರು ಹೋಮಿಯೋಪತಿ ಕಡೆ ಆಸಕ್ತಿ ತೋರಿದ್ದಾರೆ. ಕೋವಿಡ್ ಸೋಂಕು ಆರಂಭವಾದ ಬಳಿಕ ಅಲೋಪತಿ ಮಾತ್ರವಲ್ಲದೆ, ಯುನಾನಿ, ಆಯುರ್ವೇದ, ಹೋಮಿಯೋಪತಿಗೂ ಬೇಡಿಕೆ ಹೆಚ್ಚಿದೆ. ಇಂತಹ ಸಮಯದಲ್ಲಿ ಹೋಮಿಯೋಪತಿ ಅಭ್ಯಾಸ ಮಾಡುತ್ತಿರುವವರು ಹೆಚ್ಚು ಸಂಶೋಧನೆಗಳನ್ನು ನಡೆಸಿ, ಅದನ್ನು ಜನರಿಗೆ ತಿಳಿಸಬೇಕು ಎಂದರು.
ಸಾಮಾನ್ಯ ಜನರಿಗೆ ಆರೋಗ್ಯ ಭಾಗ್ಯ ನೀಡಬೇಕು ಎಂಬ ಗುರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಂದಿದ್ದಾರೆ. ಈ ಹೊಸ ಭವನ ಅದಕ್ಕೆ ಪೂರಕವಾಗಿದೆ. ಮಂಡಳಿ ಅಧ್ಯಕ್ಷ ಡಾ.ಬಿ.ಟಿ.ರುದ್ರೇಶ್ ಅವರು ತಮ್ಮ ಹಣ ಹಾಗೂ ದೇಣಿಗೆ ಬಳಸಿ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಉಪಸ್ಥಿತರಿದ್ದರು.