ಮೈಸೂರು: ಬಿಜೆಪಿಯಲ್ಲಿ ಒಂದೇ ಟೀಂ ಇರುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಬಿಜೆಪಿಯಲ್ಲಿ ಯಾವುದೇ ಟೀಂ ಇಲ್ಲ. ಬಾಂಬೆ ಟೀಂ, ಹಳೇ ಟೀಂ, ಹೊಸ ಟೀಂ ಎಂದೆಲ್ಲ ಇಲ್ಲ. ನಾವೆಲ್ಲರೂ ಒಂದೇ ಬಿಜೆಪಿ ಟೀಂ ಎಂದರು.
ಒಂದಿಬ್ಬರು ಮಾತನಾಡಿದರೆ ಇಡೀ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಇದೆ ಎಂದಲ್ಲ ಎಂದು ಅವರು ಹೇಳಿದರು.
ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ. ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿಗಳು. ಇದೆಲ್ಲ ಊಹಾಪೆÇೀಹ. ನಮಗೆಲ್ಲರಿಗೂ ಟಿಕೆಟ್ ನೀಡಿ ಸಚಿವ ಸ್ಥಾನವನ್ನು ನೀಡುವ ಮೂಲಕ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಕೊಟ್ಟ ಮಾತುನಂತೆ ನಡೆದವರು. ಅವರು ಎಂದಿಗೂ ಮಾತು ತಪ್ಪಿದವರಲ್ಲ ಎಂದು ಎಸ್ ಟಿ ಎಸ್ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು, ಸರ್ಕಾರ ಯಾವುದೇ ಸಮಸ್ಯೆ ಇಲ್ಲದೆ ನಡೆಯುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೋಷನ್ ಬೇಗ್ ಅವರು ಬಿಜೆಪಿಯನ್ನು ನಂಬಿ ಬಂದವರಲ್ಲ. ಐಎಂಎ ಪ್ರಕರಣದಲ್ಲಿ ಅವರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಅವರು ಏನೂ ತಪ್ಪು ಮಾಡಿಲ್ಲ ಎಂದಾದರೆ ಹೊರಗಡೆ ಬರುತ್ತಾರೆ. ಬೇಗ್ ಅವರು ಕಾಂಗ್ರೆಸ್ ಪಕ್ಷದ ಒಳರಾಜಕೀಯದಿಂದ ಬೇಸತ್ತು ಹೊರಬಂದಿದ್ದಾರೆಯೇ ವಿನಹ ಬಿಜೆಪಿಗೋಸ್ಕರ ಬಂದಿರಲಿಲ್ಲ. ಅವರಿಗೆ ಬಿಜೆಪಿ ಯಾವುದೇ ಆಶ್ವಾಸನೆ ಕೊಟ್ಟಿರಲಿಲ್ಲ. ಅವರಿಗೆ ಬೇಕಿದ್ದರೆ ಶಿವಾಜಿನಗರದಲ್ಲಿ ಪಕ್ಷ ಟಿಕೆಟ್ ಕೊಡುತ್ತಿತ್ತು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೋವಿಡ್ ಸಂಕಷ್ಟ ಕಾಲದಲ್ಲಿ ಅನೇಕರಿಗೆ ಉದ್ಯೋಗ ನಷ್ಟವಾಗಿದೆ. ಹಲವರಿಗೆ ಉದ್ಯೋಗ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ 40 ಸಾವಿರ ಸಹಕಾರ ಸಂಘಗಳ ಮೂಲಕ 5 ಸಾವಿರ ಉದ್ಯೋಗವನ್ನು ಜೂನ್ ಒಳಗೆ ಸೃಷ್ಟಿಸಲು ಸೂಚನೆ ನೀಡಿದ್ದೇನೆ. ಯಾವ ಯಾವ ವಿಭಾಗದಿಂದ ಯಾವ ಯಾವ ಹಾಗೂ ಎಷ್ಟು ಉದ್ಯೋಗವನ್ನು ನೀಡುತ್ತಿದ್ದೇವೆ ಎಂಬ ಮಾಹಿತಿಯನ್ನು ಹಂತ ಹಂತವಾಗಿ ನೀಡುತ್ತೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಆರ್ಥಿಕ ಸ್ಪಂದನ ಕಾರ್ಯಕ್ರಮಗಳ ಮೂಲಕ ರಾಜ್ಯದ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳ ಮೂಲಕ ಚಾಲನೆ ಕೊಟ್ಟು 39300 ಕೋಟಿ ರೂಪಾಯಿ ಸಾಲ ನೀಡುತ್ತಿದ್ದೇವೆ. ಅಲ್ಲದೆ, ಈ ಯೋಜನೆಯ ಸದ್ವಿನಿಯೋಗವಾಗಬೇಕು, ಪಾರದರ್ಶಕವಾಗಿರಬೇಕು ಎಂಬ ನಿಟ್ಟಿನಲ್ಲಿ ನಾಲ್ಕು ವಿಭಾಗಗಳಿಗೂ ನೋಡಲ್ ಅಧಿಕಾರಿಗಳ ನೇಮಕ ಮಾಡಿದ್ದೇವೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

