ಬೆಳಗಾವಿ: ತಮ್ಮೊಂದಿಗೆ ಬಂದವರ ಹಿತ ಕಾಯಲು ರಮೇಶ ಜಾರಕಿಹೊಳಿ ಅವರು ಮುಂದಾಗಿದ್ದರೆ ಅದರಲ್ಲಿ ತಪ್ಪಿಲ್ಲ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಡಿಸಿಎಂ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ತಮ್ಮೊಂದಿಗೆ ಬಿಜೆಪಿ ಸೇರಿದವರಿಗೆ ಸಚಿವ ಸ್ಥಾನ ಕೊಡಿಸುವುದಕ್ಕಾಗಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ದೆಹಲಿ ಪ್ರವಾಸ ಕೈಗೊಂಡಿರಲೂಬಹುದು. ಇದರಲ್ಲಿ ತಪ್ಪೇನಿಲ್ಲ ಎಂದು ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಎಲ್ಲ ಸಚಿವರೂ ಕ್ರಿಯಾಶೀಲವಾಗಿ ಓಡಾಡಬೇಕು. ಯೋಜನೆಗಳ ಬಗ್ಗೆ ಚರ್ಚಿಸಲು ದೆಹಲಿಗೂ ಹೋಗಬೇಕು. ಈ ನಿಟ್ಟಿನಲ್ಲಿ ರಮೇಶ ಜಾರಕಿಹೊಳಿ ಕೆಲಸ ಮಾಡುತ್ತಿದ್ದಾರೆಂದರು.
ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಅವರು ಹೇಳಿದ್ದಾರೆ. ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ವದಂತಿಗಳಿಗೆ ಹೆಚ್ಚು ಬೆಲೆ ಕೊಡಬೇಕಿಲ್ಲ. ಪಕ್ಷದ ವಿರುದ್ಧ ಮಾತನಾಡುವವರ ವಿರುದ್ಧ ರಾಜ್ಯ ಘಟಕದ ಅಧ್ಯಕ್ಷರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಸಿ.ಪಿ. ಯೋಗೀಶ್ವರ್ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಒತ್ತಾಯ ಹಿಂದಿನಿಂದಲೂ ಇದೆ. ಮುಖ್ಯಮಂತ್ರಿ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಅವರ ಪರಮಾಧಿಕಾರ ಎಂದರು.
ಮರಾಠಾ ಅಭಿವೃದ್ಧಿ ನಿಗಮ ಬಹಳ ಅಗತ್ಯವಾಗಿತ್ತು. ಅವರೂ ನಮ್ಮವರೇ. ಕನ್ನಡಿಗರೇ. ಅವರ ಅಭಿವೃದ್ಧಿಗೂ ಸರ್ಕಾರ ಕ್ರಮ ವಹಿಸಬೇಕಲ್ಲವೇ? ಈ ವಿಷಯದಲ್ಲಿ ಸಂಘಟನೆಗಳು ಪ್ರತಿಭಟನೆ ನಡೆಸುವುದು ಸಮಂಜಸವಲ್ಲ ಎಂದು ಡಿಸಿಎಂ ಹೇಳಿದರು.

