ಉಡುಪಿ: ರಾಷ್ಟ್ರೀಯ ಮಟ್ಟದಲ್ಲಿ ಸರಿಸಾಟಿ ಇಲ್ಲದ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಇನ್ನೂ ಪಂಚಾಯಿತಿ ಮಟ್ಟದಲ್ಲೂ ಬಲಿಷ್ಠವಾಗಿ ಬೆಳೆಯಬೇಕು ಹಾಗೂ ಗ್ರಾಮ ಗ್ರಾಮದಲ್ಲೂ ಕಮಲ ಅರಳಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಶುಕ್ರವಾರದಂದು ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷವೂ ಗ್ರಾಮೀಣ ಪ್ರದೇಶದ ಪ್ರತಿಹಳ್ಳಿಗೂ ವಿಸ್ತರಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.
ಪಂಚಾಯಿತಿ ಚುನಾವಣೆಯಲ್ಲಿ ಪ್ರತಿಯೊಬ್ಬರು ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು. ಗ್ರಾಮ ಮಟ್ಟದ ಘಟಕಗಳ ಬಲವರ್ಧನೆ ಮಾಡಬೇಕು ಎಂದು ಡಿಸಿಎಂ ತಿಳಿಸಿದರು.
ಸಭೆಗೂ ಮುನ್ನ ಪಕ್ಷದ ಹಿರಿಯ ಮುಖಂಡರು, ಮಾಜಿ ಸಚಿವರು ಆಗಿದ್ದ ಡಾ.ವಿ.ಎಸ್. ಆಚಾರ್ಯ ಅವರ ಪ್ರತಿಮೆಗೆ ಡಾ.ಅಶ್ವತ್ಥನಾರಾಯಣ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದರಾದ ಶೋಭಾ ಕರಂದ್ಲಾಜೆ, ಮುನಿಸ್ವಾಮಿ, ಶಾಸಕ ರಘುಪತಿ ಭಟ್ ಮುಂತಾದವರಿದ್ದರು.
ಬಳಿಕ ಇವರೆಲ್ಲರ ಜತೆ ಕೃಷ್ಣಮಠಕ್ಕೆ ತೆರಳಿದ ಉಪ ಮುಖ್ಯಮಂತ್ರಿ, ಗೋಮಾತೆ ಪೂಜೆ ಸಲ್ಲಿಸಿ ಶ್ರೀಕೃಷ್ಣ ದರ್ಶನ ಪಡೆದರು.

