ಉಡುಪಿ: ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಭಾನುವಾರ ಡಿಕೆಶಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿರೋದು ಗಂಭೀರ ವಿಚಾರ. ನನಗೆ ಮಾಧ್ಯಮದವರು ಹಾಗೂ ಸ್ನೇಹಿತರುಗಳು ಎರಡು ಮೂರು ತಿಂಗಳ ಹಿಂದೆಯೇ ನೀಡಿದ್ದ ಮಾಹಿತಿಯನ್ನು ಜನರ ಮುಂದೆ ಇಟ್ಟಿದ್ದೇನೆ. ನಾನು ಯಾರ ಹೆಸರನ್ನೂ ಹೇಳಿಲ್ಲ. ಆದರೆ ಅವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರೋದೇಕೆ? ಎಂದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು ನನ್ನ ಬಳಿ ಸಾಕ್ಷಿ ಇದೆ. ನಾನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿಲ್ಲ ಎಂದರು. ಈ ಹಿಂದೆ ರಾಜಕೀಯ ಕಾರ್ಯದರ್ಶಿಯನ್ನು ವಜಾ ಮಾಡಿದ್ದರು, ಕೆಲ ದಿನಗಳ ಹಿಂದೆ ಮಾಧ್ಯಮ ಸಲಹೆಗಾರರು ರಾಜೀನಾಮೆ ನೀಡಿದ್ದಾರೆ. ಈಗ ಅವರ ಆಪ್ತ ಹಾಗೂ ಅವರ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂದರೆ ಅದು ಜವಾಬ್ದಾರಿಯುತ ಸ್ಥಾನ. ಅವರ ಹೆಸರು ಅನೇಕ ವಿಚಾರದಲ್ಲಿ ಕೇಳಿಬಂದಿವೆ. ಹೀಗಾಗಿ ನನಗೆ ಬಂದ ಮಾಹಿತಿ ತಿಳಿಸಿದ್ದೇನೆ ಎಂದು ಡಿಕೆಶಿ ಹೇಳಿದರು.
ಸಂತೋಷ್ ಅವರ ಪತ್ನಿ ಇದಕ್ಕೂ ಕುಟುಂಬಕ್ಕೂ ಸಂಬಂಧ ಇಲ್ಲ. ರಾಜಕೀಯ ಒತ್ತಡದಿಂದ ಈ ಪ್ರಯತ್ನ ಮಾಡಿರಬೇಕು ಎಂದು ಹೇಳಿದ್ದಾರೆ. ಅಂತಹ ಒತ್ತಡ ಅವರ ಮೇಲೆ ಏನಿತ್ತು? ಅವರನ್ನು ಯಾರಾದರೂ ಬೆದರಿಸುತ್ತಿದ್ದರೆ? ಅವರ ಹೆಸರಿಗೆ ಕಳಂಕ ತರುವಂತಹದ್ದು ಏನಾದರೂ ಇದೆಯೇ? ಅವರ ಮೇಲೆ ಇರುವ ರಾಜಕೀಯ ಒತ್ತಡ ಏನು ಎಂಬುದು ಜನರಿಗೆ ಗೊತ್ತಾಗಬೇಕು ಎಂದರು.
ಸಿಎಂ ಅವರ ರಾಜಕೀಯ ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಮುಂದಾದಾಗ ಈ ಬಗ್ಗೆ ಮಾತನಾಡಬೇಕಾಗುತ್ತದೆ. ಸಂತೋಷ್ ಅವರಿಗೆ, ಸಾಲದ ಒತ್ತಡವಿಲ್ಲ. ಚಿಕ್ಕ ವಯಸ್ಸಿಗೆ ದೊಡ್ಡ ಜವಾಬ್ದಾರಿ, ಸ್ಥಾನಮಾನ ಸಿಕ್ಕಿದೆ. ಅವರಿಗೆ ರಾಜಕೀಯ ಒತ್ತಡ ಬಿಟ್ಟರೆ ಬೇರೆ ಯಾವುದೇ ಕಾರಣಗಳು ಇಲ್ಲವಾಗಿದೆ. ಅವರಿಗೆ ಸಾಕ್ಷಾಧಾರ ಬೇಕು ಎಂದರೆ ಉನ್ನತ ಮಟ್ಟದ ತನಿಖೆ ನಡೆಸಲಿ ಎಂದರು.
ನಾನು ಆ ಸಚಿವ ಯಾರು? ಆ ವಿಧಾನ ಪರಿಷತ್ ಸದಸ್ಯ ಯಾರು ಎಂದು ಹೇಳಿಲ್ಲ. ಆದರೂ ಅವರು ಯಾಕೆ ತಮ್ಮ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆದರೆ, ಈ ವಿಡಿಯೋ ಇದೆಯೋ, ಇಲ್ಲವೋ, ಅವರನ್ನು ಬೆದರಿಸಲಾಗಿತ್ತೋ, ಇಲ್ಲವೋ ಎಂಬುದೆಲ್ಲ ಹೊರಗೆ ಬರುತ್ತದೆ. ಗೃಹ ಸಚಿವರು ಈ ಪ್ರಕರಣದ ತನಿಖೆ ನಡೆಸುವುದಾಗಿ ತಿಳಿಸಿರುವುದು ಸ್ವಾಗತಾರ್ಹ ಎಂದು ಡಿಕೆಶಿ ತಿಳಿಸಿದರು.
ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ? -ಡಿ.ಕೆ.ಶಿ

