ರಾಮನಗರ: ಪ್ರತಿ ಗ್ರಾಮ ಪಂಚಾಯಿತಿಗೂ ವರ್ಷಕ್ಕೆ 1.5 ರೂ. ಅನುದಾನವನ್ನು ನೇರವಾಗಿ ಬಿಡುಗಡೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.
ರಾಮನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿಗೆ ಬೇಕಾದ ಎಲ್ಲ ಹಣಕಾಸು ಒದಗಿಸಲಾಗುವುದು ಜತೆಗೆ, ಆಯಾ ಗ್ರಾಮಗಳ ನರೇಗಾ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಜಿಲ್ಲಾ ಪಂಚಾಯಿತಿಯಿಂದ ಗ್ರಾಮ ಪಂಚಾಯಿತಿ É ವಹಿಸಲಾಗುವುದೆಂದರು.
ಗರೀಬಿ ಹಠಾವೋ ಸೇರಿದಂತೆ ಯಾವುದೇ ಘೋಷಣೆಗಳ ಮೂಲಕ ಗ್ರಾಮಗಳಲ್ಲಿ ಬಡತನ ನಿರ್ಮೂಲನೆ ಆಗಲಿಲ್ಲ. ಎಪ್ಪತ್ತು ವರ್ಷಗಳಾದರೂ ಬಡತನ ಜೀವಂತವಾಗಿದೆ ಎಂದವರು ಹೇಳಿ, ಕಾಂಗ್ರೆಸ್ ಬರೀ ಘೋಷಣೆಗಳನ್ನು ಮಾಡುತ್ತಾ ಬಂದಿತ್ತು. ಅವುಗಳಲ್ಲಿ ಗರೀಬಿ ಹಠಾವೋ ಒಂದು. ಬಿಜೆಪಿ ಘೋಷಣೆ ಬದಲು ಕೆಲಸ ಮಾಡುತ್ತಿದೆ. ಪರಿಣಾಮವಾಗಿ ಭಾರತ ಬದಲಾಗುತ್ತಿದೆ ಎಂದು ಡಿಸಿಎಂ ತಿಳಿಸಿದರು.
ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅನೇಕ ವರ್ಷಗಳಿಂದ ಆಡಳಿತ ನಡೆಸಿವೆ. ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ಕೊಟ್ಟಂಥ ಜಿಲ್ಲೆ. ಅನೇಕ ನಾಯಕರಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ನೆಲವೂ ರಾಮನಗರ. ಗೆದ್ದುಹೋದ ಮೇಲೆ ಜಿಲ್ಲೆ ಮರೆತು, ಚುನಾವಣೆ ಬಂದಾಗ ಪ್ರತ್ಯಕ್ಷವಾಗುವ ನಾಯಕರಿಗೆ ಪಾಠ ಕಲಿಸಬೇಕಾದ ಸಮಯ ಗ್ರಾಮ ಪಂಚಾಯಿತಿ ಚುನಾವಣೆ ಮೂಲಕ ಬಂದಿದೆ ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.
ಕೋವಿಡ್ ಸಂಕಷ್ಟ ಕಾಲದಲ್ಲಿ ಜಿಲ್ಲಾಸ್ಪತ್ರೆಗೆ ಹೋದರೆ ಸುಸಜ್ಜಿತ ಐಸಿಯು ಇರಲಿಲ್ಲ. ಸಣ್ಣ ಜ್ವರ ಬಂದರೂ ಕೆಂಗೇರಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಈಗ ಆಸ್ಪತ್ರೆಯಲ್ಲಿ ಆಗಿರುವ ಬದಲಾವಣೆ ನೋಡಬಹುದು ಎಂದರು.
ಇಷ್ಟು ದಿನ ಒಬ್ಬರ ಹೆಸರಿನಲ್ಲಿ ಇನ್ನೊಬ್ಬರು, ಮತ್ತೊಬ್ಬರ ಹೆಸರಿನಲ್ಲಿ ಮಗದೊಬ್ಬರು ಆಡಳಿತ ನಡೆಸಿದ್ದು ಸಾಕು. ಹೀಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಜನರು ಗೆಲ್ಲಿಸಬೇಕು. ಆ ಮೂಲಕ ಗ್ರಾಮ ಗ್ರಾಮದಲ್ಲಿಯೂ ಸ್ವರಾಜ್ಯ ಬರಬೇಕು. ಎಂದು ಡಿಸಿಎಂ ತಿಳಿಸಿದರು.
ಬಿಜೆಪಿ ಸರಕಾರ ಬಂದ ಮೇಲೆ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಶ್ರೀರಂಗ ಏತ ನೀರಾವರಿ ಯೋಜನೆಗೆ ಇನ್ನೂ ಹೆಚ್ಚುವರಿಯಾಗಿ 175 ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದರು.
ಎಲ್ಲ ಜಾತಿ- ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವಂಥ ಕೆಲಸವನ್ನು ಯಡಿಯೂರಪ್ಪ ನೇತೃತ್ವದ ಸರಕಾರ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಲಾಗಿದೆ. ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರಕಾರ ಬದ್ಧವಾಗಿದೆ ಎಂದರು ಡಿಸಿಎಂ.
ಸುದ್ದಿಗೋಷ್ಠಿಯಲ್ಲಿ ಮುಜರಾಯಿ ಸಚಿವ ಶ್ರಿನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಪುಟ್ಟಣ್ಣ, ದೇವೇಗೌಡ ಉಪಸ್ಥಿತರಿದ್ದರು.

