ಬೆಂಗಳೂರು: ಮುನ್ನೆಚ್ಚರಿಕೆ ಕ್ರಮ, ಜಾಗೃತಿ ಮೂಲಕ ಎಚ್‍ಐವಿ ಸೋಂಕು ಹರಡುವುದನ್ನು ತಡೆಗಟ್ಟಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಆರೋಗ್ಯ ಸೌಲಭ್ಯಗಳು ಇರುವುದರಿಂದ ಏಡ್ಸ್ ಪ್ರಕರಣಗಳಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆ. 99 ವರ್ಷದ ಎಚ್ ಐವಿ ಸೋಂಕಿತರು ಕೂಡ ಜೀವಂತವಾಗಿ ಆರೋಗ್ಯದಿಂದಿದ್ದಾರೆಂದರು.
ಎಚ್ ಐವಿ ಸೋಂಕಿತರಿಗೆ ಕೋವಿಡ್ ಕೂಡ ಬಂದರೆ ಕಷ್ಟ ಎಂದು ಮೊದಲಿಗೆ ಭಯವಾಗಿತ್ತು. ರಾಜ್ಯದಲ್ಲಿ 280 ಎಚ್ ಐವಿ ಸೋಂಕಿತರು ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಈ ಪೈಕಿ 275 ಮಂದಿ ಜೀವಂತವಾಗಿದ್ದು, ಅವರ ಆರೋಗ್ಯ ಸುರಕ್ಷಿತವಾಗಿದೆ ಎಂದರು.
ಎಚ್‍ಐವಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಅವರಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ಔಷಧಿ ನೀಡಬೇಕು ಎಂದು ಆರೋಗ್ಯ ಕೇಂದ್ರಗಳಿಗೆ ಸೂಚಿಸಲಾಗಿದೆ. ಎಪಿಎಲ್ ಹಾಗೂ ಬಿಪಿಎಲ್ ರೋಗಿಗಳಿಗೆ ಇದು ಅನ್ವಯವಾಗಲಿದೆ ಎಂದು ಹೇಳಿದರು.
ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಇನ್ನೂ ಪ್ರಯೋಗ ನಡೆಯುತ್ತಿದೆ. ರಾಜ್ಯದಲ್ಲಿ ವೈದೇಹಿ ವೈದ್ಯಕೀಯ ಸಂಸ್ಥೆಯಲ್ಲಿ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ. ಶೀಘ್ರದಲ್ಲೇ ಲಸಿಕೆ ದೊರೆಯಲಿದೆ ಎಂದರು.

