ಬೆಂಗಳೂರು: ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡುವ ವ್ಯವಸ್ಥೆ ಇರುವುದು ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚುವ ಡಾ. ಕೆ. ಸುಧಾಕರ್ ಹೇಳಿದರು.
ಲಾಲ್ ಬಾಗ್ ನ ಡಾ. ಎಂ.ಎಚ್. ಮರೀಗೌಡ ಸಭಾಂಗಣದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆ.ವಿ. ನಾಗರಾಜು ಪದಗ್ರಹಣ ಸಮಾರಂಭದಲ್ಲಿ ಬುಧವಾರ ಪಾಲ್ಗೊಂಡು ಅವರು ಮಾತನಾಡಿದರು.
ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಸಿಕ್ಕಾಗ ಅಧಿಕಾರ ನೀಡಲಾಗುತ್ತದೆ ಎಂಬುದಕ್ಕೆ ರಾಜ್ಯಸಭೆ ಅಭ್ಯರ್ಥಿ ಆಯ್ಕೆಯೇ ನಿದರ್ಶನ. ಎಂದು ಅವರು ತಿಳಿಸಿದರು.
ಪಕ್ಷದ ನಾನಾ ಹಂತಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಯಕರ್ತರ ಕಾರ್ಯ ವೈಖರಿಯನ್ನು ಗಮನಿಸಲಾಗುತ್ತಿರುತ್ತದೆ. ಅವಕಾಶ ಸಿಕ್ಕಾಗ ಆದ್ಯತೆ ಮೇರೆಗೆ ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಮುಂಬರುವ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಸ್ಥಳೀಯ ನಾಯಕರಿಗೆ ಅವಕಾಶ ನೀಡಲಾಗುತ್ತಿದೆ. ಅಭ್ಯರ್ಥಿಗಳನ್ನು ನೀವೆ ಆಯ್ಕೆ ಮಾಡಿಕೊಳ್ಳಬೇಕು. ಶಿಕ್ಷಿತರು, ಸಮಾಜಮುಖಿ ಚಿಂತನೆ ಇದ್ದವರನ್ನು ಆಯ್ಕೆ ಮಾಡಿದರೆ ಅಭಿವೃದ್ಧಿ ಸಾಧ್ಯವಿದೆ. ಮೇಲಿನಿಂದ ಅಭ್ಯರ್ಥಿಗಳನ್ನು ಹೇರಿಕೆ ಮಾಡುವ ಪ್ರಶ್ನೆ ಇಲ್ಲ ಎಂದು ಡಾ. ಸುಧಾಕರ್ ಹೇಳಿದರು.
ರಾಜ್ಯದಲ್ಲಿ ಮಾವು ಬೆಳೆಗಾರರಿಗೆ ನಿಗಮದಿಂದ ಹೆಚ್ಚಿನ ಪ್ರಯೋಜನ ಆಗಬೇಕಿದೆ. ತಳಿ ಆಯ್ಕೆಯಿಂದ ಮಾರುಕಟ್ಟೆ ಒದಗಿಸುವತನಕ ನಿಗಮವು ಬೆಳೆಗಾರ ಮತ್ತು ಗ್ರಾಹಕರಿಗೆ ಸೇತುವೆಯಂತೆ ಕಾರ್ಯ ನಿರ್ವಹಿಸಬೇಕಿದೆ. ಮಾವಿನಹಣ್ಣಿಗೆ ವಿದೇಶಿ ಮಾರುಕಟ್ಟೆ ಒದಗಿಸುವ ಕೆಲಸ ಆಗಬೇಕು. ನಿಗಮಕ್ಕೆ ಹೆಚ್ವಿನ ಅನುದಾನ ಸೇರಿದಂತೆ ಎಲ್ಲಾ ರೀತಿ ನೆರವನ್ನೂ ದೊರಕಿಸಿಕೊಡುವುದಾಗಿ ಸಚಿವ ಸುಧಾಕರ್ ಭರವಸೆ ನೀಡಿದರು.
ನಿಗಮದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಮುಖಂಡರಾದ ರಾಮಲಿಂಗಪ್ಪ, ಚನ್ನಕೃಷ್ಣಾರೆಡ್ಡಿ, ನಾರಾಯಣಸ್ವಾಮಿ, ನಂಜುಂಡಪ್ಪ, ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜು, ಹಿರಿಯ ತಜ್ಞ ಹಿತ್ತಲಮನಿ ಹಾಗೂ ಮಾವು ಬೆಳೆಗಾರರು ಉಪಸ್ಥಿತರಿದ್ದರು.

