ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 2ನೇ ಅಲೆಯನ್ನು ತಪ್ಪಿಸಲು ರಾಜ್ಯದಲ್ಲಿ ಕೆಲವು ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತೇವೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ರಾತ್ರಿ ಕರ್ಫ್ಯೂ ಜಾರಿ ಮಾಡುವ ಕುರಿತು ಚರ್ಚೆಯಾಗಿಲ್ಲ. ತಾಂತ್ರಿಕ ಸಲಹಾ ಸಮಿಯೂ ಈ ಬಗ್ಗೆ ಯಾವುದೇ ಸಲಹೆ ನೀಡಿಲ್ಲ. ಹಾಗಾಗಿ ನೈಟ್ ಕರ್ಫ್ಯೂ ಪ್ರಶ್ನೆಯೇ ಇಲ್ಲ ಎಂದವರು ಹೇಳಿದರು.
ಜನವರಿ, ಫೆಬ್ರವರಿಯಲ್ಲಿ ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಬರುವ ಸಾಧ್ಯತೆ ಇದೆ. ಅದಕ್ಕೆ ತಜ್ಞರ ಸಮಿತಿ ಸ್ಪಷ್ಟ ಮಾಹಿತಿ ನೀಡಿದೆ. ಮುಂದಿನ 45 ದಿನ ಮಹತ್ವದ್ದಾಗಿದೆ. ಲಾಕ್ ಡೌನ್ ಸಮಯದಲ್ಲಿ ತೆಗೆದುಕೊಂಡ ಕ್ರಮಗಳನ್ನು ಮತ್ತೆ ತೆಗೆದುಕೊಳ್ಳುವ ಅನಿವಾರ್ಯತೆ ಇದೆ ಎಂದು ಡಾ. ಸುಧಾಕರ್ ತಿಳಿಸಿದರು.

