ಎರಡನೇ ಅಲೆ, ನಿರ್ಬಂಧಗಳ ಬಗ್ಗೆ ಇತ್ಯರ್ಥ -ಸಚಿವ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‍ನ ಎರಡನೇ ಅಲೆ ಕಾಣಿಸಿಕೊಳ್ಳಲಿದೆ ಎಂಬ ವರದಿ ಕುರಿತಂತೆ ತಜ್ಞರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಸಚಿವ ಸುಧಾಕರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗುರುವಾರ ಮಾತನಾಡಿದರು.
ತಾಂತ್ರಿಕ ಸಮಿತಿ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಲಾಗುವುದು ಎಂದರು.
ಸಭೆ ತೀರ್ಮಾನಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವ ಸಹೋದ್ಯೋಗಿಗಳ ಜತೆ ಸಮಾಲೋಚಿಸಿ ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಕೋವಿಡ್‍ನ ಎರಡನೇ ಅಲೆ ಪರಿಣಾಮಕಾರಿಯಾಗಿರುತ್ತದೆ ಎಂದು ವೈಯಕ್ತಿಕವಾಗಿ ತಮಗೆ ಅನ್ನಿಸುತ್ತಿಲ್ಲ. ಆದರೂ ತಜ್ಞರು ನಡೆಸಿರುವ ಅಧ್ಯಯನ ವರದಿಯಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಿ ಎಚ್ಚರಿಕೆಯ ಹೆಜ್ಜೆ ಇರಿಸಲಾಗುವುದು ಎಂದರು.
ಕೋವಿಡ್ ನಿಯಂತ್ರಣಕ್ಕೆ ಸಾಮಾಜಿಕ ಲಸಿಕೆ ಎಂದೇ ಹೇಳಲಾಗಿರುವ ಮಾಸ್ಕ್, ಸಾಮಾಜಿಕ ಅಂತರ ಮತ್ತು ಶುಚಿತ್ವ ಲಸಿಕೆಗಿಂತಲೂ ಹೆಚ್ಚು ಪರಿಣಾಮಕಾರಿ ಎಂಬುದನ್ನು ತಜ್ಞರೇ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ವಿವರಿಸಿದರು.
ಹೊಸ ವರ್ಷ ಮತ್ತು ಕ್ರಿಸ್ಮಸ್ ಹಿನ್ನೆಲೆಯಲ್ಲಿ ಬಿಗಿ ಕ್ರಮ ಜಾರಿಗೊಳಿಸುವ ಬಗ್ಗೆಯೂ ತಜ್ಞರ ಜತೆ ಚರ್ಚಿಸಲಾಗುವುದು. ಇದು ಭಾರತೀಯ ಕ್ಯಾಲೆಂಡರ್‍ನ ಹೊಸ ವರ್ಷ ಅಲ್ಲ. ಯುಗಾದಿ ನಮ್ಮ ಹೊಸ ವರ್ಷ. ಎಲ್ಲಕ್ಕಿಂತ ಮಿಗಿಲಾಗಿ ಕೋವಿಡ್‍ನ ಸಂಕಷ್ಟ ಸ್ಥಿತಿಯಲ್ಲಿ ಸಂಭ್ರಮಾಚರಣೆ ಅಗತ್ಯವಾದರೂ ಏನಿದೆ? ನೂರಾರು ಜನರನ್ನು ಕಳೆದುಕೊಂಡಿದ್ದೇವೆ. ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ, ನೂರಾರು ಜನ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ, ಇನ್ನೂ ಪರಿಸ್ಥಿತಿ ಸುಧಾರಣೆ ಆಗಿಲ್ಲ, ಇಂಥ ಸನ್ನಿವೇಶದಲ್ಲಿ ಸಂಭ್ರಮದ ಅಗತ್ಯವಾದರು ಏಕೆ ಬೇಕು ಹೇಳಿ ಎಂದು ಅವರು ಪ್ರಶ್ನಿಸಿದರು.
ನಿರ್ಬಂಧಗಳ ಪ್ರಶ್ನೆಗೆ ಉತ್ತರಿಸಿ, ಸಣ್ಣ ಪ್ರದೇಶದಲ್ಲಿ ಹೆಚ್ಚು ಜನ ಸೇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗುವುದಿಲ್ಲ. ಜತೆಗೆ ಜನವರಿಯಲ್ಲಿ ಎರಡನೇ ಅಲೆ ಕಾಣಿಸಿಕೊಳ್ಳುವ ಬಗ್ಗೆ ತಜ್ಞರು ಏನು ಹೇಳುತ್ತಾರೋ ಗೊತ್ತಿಲ್ಲ. ಹೀಗಾಗಿ ಎಲ್ಲಾ ವಿಷಯಗಳನ್ನು ಅವಲೋಕಿಸಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೊಸವರ್ಷ ಮತ್ತು ಕ್ರಿಸ್ಮಸ್ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದರು.
ವ್ಯಾಕ್ಸಿನ್ ವಿತರಣೆ ಮತ್ತು ದಾಸ್ತಾನು ಸಂಬಂಧ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಂತಿಮವಾಗಿ ಯಾವ ವ್ಯಾಕ್ಸಿನ್? ಎಷ್ಟು ಪ್ರಮಾಣದಲ್ಲಿ ನೀಡಬೇಕು? ಯಾರಿಗೆ ನೀಡಬೇಕು ಎಂಬ ವಿಷಯ ಇತ್ಯರ್ಥ ಆದ ಬೆನ್ನಲ್ಲೇ ವ್ಯಾಕ್ಸಿನ್ ವಿತರಣೆ ವ್ಯವಸ್ಥಿತವಾಗಿ ನಡೆಯಲಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಸುಧಾಕರ್, ವಿಶ್ವನಾಥ್ ಅವರು ಒಂಟಿಯಲ್ಲ. ಮುಖ್ಯಮಂತ್ರಿ ಸಹಿತ ನಾವು ಹದಿನೇಳು ಮಂದಿಯೂ ಅವರ ಜತೆಗಿದ್ದೇವೆ. ನಾವೆಲ್ಲರೂ ಈಗ ಬಿಜೆಪಿ ಕಾರ್ಯಕರ್ತರೇ ಆಗಿದ್ದೇವೆ. ಅವರನ್ನು ಏಕಾಂಗಿಯಾಗಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.