ಕೋವಿಡ್ ನಿಯಮ ಕಠಿಣಗೊಳಿಸಿದ ಬಿಬಿಎಂಪಿ

ಬೆಂಗಳೂರು: ಕೊರೊನಾವನ್ನ ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೋವಿಡ್ ನಿಯಮಗಳನ್ನು ಕಠಿಣಗೊಳಿಸಿದೆ.
ಕರ್ನಾಟಕದಲ್ಲಿ ಮಾರಕ ಕೊರೊನಾ ವೈರಸ್ ನ ಎರಡನೇ ಅಲೆಯ ಭೀತಿಯ ಹಿನ್ನಲೆಯಲ್ಲಿ ಬಿಬಿಎಂಪಿ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ನಿಯಮ ಉಲ್ಲಂಘಿಸುವ ಹೋಟೆಲ್ ಹಾಗೂ ಉದ್ದಿಮೆಗಳಿಗೆ 5 ಸಾವಿರ ರೂದಿಂದ 1 ಲಕ್ಷ ರೂವರೆಗೆ ದಂಡ ವಿಧಿಸಲು ಮುಂದಾಗಿದೆ.
ಈ ಬಗ್ಗೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಹರಡದಂತೆ ತಡೆಯಲು ಜನರು ಪರಸ್ಪರ ಅಂತರ ಕಾಪಾಡುವುದನ್ನು ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಹಕರು ಮಾಸ್ಕ್ ಧರಿಸಿ, ಸ್ಯಾನಿಟೈಸರ್‍ನಲ್ಲಿ ಕೈತೊಳೆದ ಬಳಿಕವೇ ಒಳಗೆ ಪ್ರವೇಶಿಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮಾರ್ಗ ಸೂಚಿಯಲ್ಲಿ ಸೂಚಿಸಲಾಗಿದೆ.
ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನ ಆಧಾರದಲ್ಲಿ ಅಂಗಡಿ ಮಳಿಗೆಗಳು, ಮಾಲ್‍ಗಳು ಹೋಟೆಲ್ ರೆಸ್ಟೋರಂಟ್, ಕಲ್ಯಾಣ ಮಂಟಪ, ಚಿತ್ರಮಂದಿರಗಳ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ಹಾಗೂ ಸುರಕ್ಷಿತ ಅಂತರ ಕಾಪಾಡದವರಿಗೆ ವ್ಯಕ್ತಿಗತವಾಗಿ ದಂಡ ಹಾಕಲಾಗುತ್ತಿತ್ತು. ಇನ್ನು ಉದ್ದಿಮೆಗಳು ಹಾಗೂ ಸಂಸ್ಥೆಗಳ ಮಾಲೀಕರಿಗೂ ದಂಡ ವಿಧಿಸಲು ಬಿಬಿಎಂಪಿ ಆರೋಗ್ಯ ನಿರೀಕ್ಷಕರು ಹಾಗೂ ಮಾರ್ಷಲ್‍ಗಳು ಕ್ರಮಕೈಗೊಳ್ಳಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಸ್ವಸಹಾಯ ಪದ್ಧತಿಯ ಹೋಟೆಲ್, ದರ್ಶಿನಿ, ಆಹಾರ ಮಳಿಗೆ, ಸಣ್ಣ ಅಂಗಡಿ, ಮಳಿಗೆ, ಬೀದಿಬದಿಯಲ್ಲಿ ತ್ವರಿತ ಆಹಾರ ಪೂರೈಸುವ ಮಳಿಗೆಗಳಲ್ಲಿ ನಿಯಮ ಉಲ್ಲಂಘನೆ ಮಾಡಿದರೆ 5 ಸಾವಿರ ರೂ ದಂಡ ವಿಧಿಸಲು ತೀರ್ಮಾನಿಸಲಾಗಿದೆ. ಅಂತೆಯೇ ಹವಾನಿಯಂತ್ರಣ ವ್ಯವಸ್ಥೆರಹಿತ ರೆಸ್ಟೋರಂಟ್, ಪಾರ್ಟಿ ಹಾಲ್, ಅಂಗಡಿ/ಮಳಿಗೆ, ಡಿಪಾರ್ಟ್‍ಮೆಂಟಲ್ ಸ್ಟೋರ್, ಖಾಸಗಿ ಬಸ್‍ನಿಲ್ದಾಣ, ಇತರ ಸಾರ್ವಜನಿಕ ಸ್ಥಳಗಳಲ್ಲಿ 25,000 ರೂ ದಂಡ, ಹವಾನಿಯಂತ್ರಿತ ರೆಸ್ಟೋರಂಟ್, ಪಾರ್ಟಿ ಹಾಲ್, ಅಂಗಡಿ/ ಮಳಿಗೆ, ಡಿಪಾರ್ಟ್‍ಮೆಂಟಲ್ ಸ್ಟೋರ್ಸ್, ಬ್ರ್ಯಾಂಡೆಡ್ ಮಳಿಗೆ, ಚಿತ್ರಮಂದಿರ, ಮಲ್ಟಿಪ್ಲೆಕ್ಸ್, ಶಾಪಿಂಗ್ ಮಾಲ್ ಮತ್ತು ಇತರ ಸಾರ್ವಜನಿಕ ಸ್ಥಳ ರೂ. 50,000, 3 ಮತ್ತು ಅದಕ್ಕಿಂತ ಹೆಚ್ಚು ತಾರಾ ಮೌಲ್ಯದ ಹೋಟೆಲ್, 500 ಅಥವಾ ಅದಕ್ಕಿಂತ ಹೆಚ್ಚು ಆಸನ ವ್ಯವಸ್ಥೆ ಇರುವ ಕಲ್ಯಾಣ ಮಂಟಪ, ಸಮುದಾಯ ಭವನ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿದರೆ 1 ಲಕ್ಷ ರೂಗಳ ವರೆಗೆ ದಂಡ ವಿಧಿಸಲಾಗುತ್ತದೆ. ಅಂತೆಯೇ ಸಾರ್ವಜನಿಕ ಸಭೆ,ಸಮಾರಂಭ, ಕಾರ್ಯಕ್ರಮ, ರ?ಯಾಲಿ ಕೂಟ, ಆಚರಣೆಗಳ ಆಯೋಜಕರಿಗೆ 50,000 ರೂ ದಂಡ ವಿಧಿಸಲಾಗುತ್ತದೆ ಮತ್ತು ಈ ಪಟ್ಟಿಯಲ್ಲಿರದ ಇತರ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿದರೆ 10,000 ರೂಗಿಂತ ಹೆಚ್ಚು ದಂಡ ವಿಧಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.