ರೈತರನ್ನು ಉದ್ದಿಮೆದಾರರ ಗುಲಾಮರನ್ನಾಗಿ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ -ಡಿ.ಕೆ. ಶಿವಕುಮಾರ್

ಬೆಂಗಳೂರು: ದೇಶದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವ ಮೂಲಕ ರೈತರನ್ನು ಉದ್ದಿಮೆದಾರರ ಗುಲಾಮರನ್ನಾಗಿ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಡಿ.ಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರೈತ ಈ ದೇಶದ ಬೆನ್ನೆಲುಬು. ಆತನ ರಕ್ಷಣೆಗೆ ನಿಲ್ಲುವುದು ನಮ್ಮ ಕರ್ತವ್ಯ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ನಮಗೆ ಅನ್ನ ನೀಡುವ ಅನ್ನದಾತನ ಬಾಯಿಗೆ ಮಣ್ಣು ಹಾಕಲು ಬಿಜೆಪಿ ಸರ್ಕಾರ ಮುಂದಾಗಿರೋದು ದೇಶದ ದುರಂತ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಹೇಗೆ ಜಾತಿ, ಧರ್ಮ ಭೇದ ಮರೆತು ಹೋರಾಟ ಮಾಡಿದರೋ ಅದೇ ರೀತಿ ಇಂದು ರೈತರ ರಕ್ಷಣೆಗೆ ಎಲ್ಲ ವರ್ಗದ ಜನ ಒಟ್ಟಾಗಿ ನಿಂತಿದ್ದಾರೆಂದರು.
ಕೇಂದ್ರ ಸರ್ಕಾರ ಮೇಲ್ನೋಟಕ್ಕೆ ಎಪಿಎಂಸಿ (ಮಂಡಿ ಮಾರುಕಟ್ಟೆ) ಮುಚ್ಚುವುದಿಲ್ಲ ಎಂದು ಹೇಳುತ್ತಿದೆ. ಆದರೆ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಸೆಸ್ ವಿಧಿಸಲಾಗಿದ್ದು, ಎಪಿಎಂಸಿ ಹೊರಗಡೆ ವ್ಯಾಪಾರಕ್ಕೆ ಸೆಸ್ ಇಲ್ಲ. ಇದರಿಂದ ರೈತರನ್ನು ಎಪಿಎಂಸಿಯಿಂದ ದೂರ ಮಾಡುವ ಹುನ್ನಾರ ನಡೆದಿದೆ. ರೈತರು ಈ ಮಾರುಕಟ್ಟೆಯಿಂದ ದೂರ ಉಳಿದರೆ ಸಹಜವಾಗಿಯೆ ಮಂಡಿ ಮಾರುಕಟ್ಟೆಗೆ ಬೀಗ ಹಾಕಲಾಗುತ್ತದೆಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳು ಕೊಟ್ಟ ಭಾರತ ಬಂದ್ ಕರೆಗೆ ಬೆಂಬಲ ಸೂಚಿಸಿದ ಕಾಂಗ್ರೆಸ್, ವಿಧಾನಸೌಧದ ಗಾಂಧಿ ಪ್ರತಿಮೆ, ಟೌನ್ ಹಾಲ್ ಮುಂಭಾಗ ಹಾಗೂ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು.