ಜೆಡಿಎಸ್ ನಾಯಕರನ್ನು ಪ್ರಧಾನಿ, ಮುಖ್ಯಮಂತ್ರಿ ಮಾಡಿದ್ದೇ ಶಾಲು -ಡಿಕೆಶಿ

ಬೆಂಗಳೂರು: ಜೆಡಿಎಸ್ ನಾಯಕರನ್ನು ಪ್ರಧಾನಿ, ಮುಖ್ಯಮಂತ್ರಿ ಮಾಡಿದ್ದೇ ಶಾಲು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ನಗರದಲ್ಲಿ ಬುಧವಾರ ಡಿಕೆಶಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಶಾಲಿನ ಬಗ್ಗೆ ಕುಮಾರಸ್ವಾಮಿ ಅವರ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸಿ, ಪಾಪ ಏನು ಮಾಡ್ತೀರಿ. ಜೆಡಿಎಸ್ ನಾಯಕರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದ್ದು, ಇದೇ ಶಾಲು. ಕುಮಾರಸ್ವಾಮಿ ಅವರನ್ನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಿದ್ದು ಕೂಡ ಇದೇ ಶಾಲು. ಈಗ ಅವರು ಅದೇ ಶಾಲಿನ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಎಂದರೆ ಇದರ ಬಗ್ಗೆ ರಾಜ್ಯದ ಜನತೆ ತೀರ್ಮಾನ ಮಾಡಲಿ ಎಂದು ಮಾರ್ಮಿಕವಾಗಿ ನುಡಿದರು.
ಸಿದ್ದರಾಮಯ್ಯನವರು ಯಡಿಯೂರಪ್ಪನವರನ್ನು ಭೇಟಿ ಮಾಡಿರುವ ಬಗ್ಗೆ ಅವರನ್ನೇ ಕೇಳಬೇಕು. ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ನಾನೇನು ಹೇಳಲಿ ಎಂದರು.
30 ಸಾವಿರ ಕೋಟಿ ಹಣವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟು ಆ ಹಣವನ್ನು ಅವರಿಗಾಗಿಯೇ ಖರ್ಚು ಮಾಡಲು ನಾವು ಕಾನೂನು ರೂಪಿಸಿದ್ದೆವು.
ಕಳೆದ ಬಜೆಟ್ ನಲ್ಲಿ ಇದು 17 ಸಾವಿರ ಕೋಟಿಗೆ ಇಳಿದಿತ್ತು. ಆರ್ಥಿಕ ಸಂಪನ್ಮೂಲ ಕೊರತೆ ಪರಿಸ್ಥಿತಿ ಅರಿತು ನಾವು ಈ ಬಗ್ಗೆ ಮಾತನಾಡಿರಲಿಲ್ಲ. ಈಗ 10 ಸಾವಿರ ಕೋಟಿಗೆ ಬಂದಿದ್ದು, ಜತೆಗೆ ಆ ಹಣವನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಿದೆ. ಇದು ಬಿಜೆಪಿಯು ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರ ವಿಚಾರವಗಿ ಬದ್ಧತೆ ಹೊಂದಿಲ್ಲ ಎಂಬುದಕ್ಕೆ ಸಾಕ್ಷಿ ಎಂದರು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಸಚಿವ ಶ್ರೀರಾಮುಲು ಸಮ್ಮತಿ ಇಲ್ಲದೆ ಈ ಇಲಾಖೆ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಇದು ದಲಿತ ವಿರೋಧಿ ಸರ್ಕಾರವಾಗಿದ್ದು, ಇದು ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ಕೂಡಲೇ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಸಚಿವ ಶ್ರೀರಾಮುಲು ರಾಜೀನಾಮೆ ನೀಡಬೇಕು ಎಂದು ಡಿ.ಕೆ ಶಿವಕುಮಾರ್ ಒತ್ತಾಯಿಸಿದರು.