ಬೆಂಗಳೂರು: ವಯಸ್ಸಾದ ಜಾನುವಾರುಗಳನ್ನು ಸರ್ಕಾರವೇ ರೈತರಿಂದ ಖರೀದಿಸಿ, ಹಸುಗಳ ಮಾಲೀಕತ್ವವನ್ನು ಸರಕಾರದ ಪ್ರತಿನಿಧಿಗಳೇ ಪಡೆದು, ಮಂತ್ರಿಗಳ ಮನೆಯಲ್ಲೋ, ಜಮೀನಿನಲ್ಲೋ ಸಾಕಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಮಾರ್ ಮಾತನಾಡಿದರು.
ವಯಸ್ಸಾದ ಹಾಗೂ ರೈತರಿಗೆ ಅನುಕೂಲವಾಗದ ಜಾನುವಾರುಗಳನ್ನು ರಾಜ್ಯ ಸರ್ಕಾರ ಖರೀದಿಸಿ ಅವುಗಳನ್ನು ಬಿಜೆಪಿ ಮುಖಂಡರ ಮನೆಯಲ್ಲೋ, ಜಮೀನಿನಲ್ಲೋ ಸಾಕಲಿ ಎಂದರು.
ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನೂತನ ಗೋಹತ್ಯೆ ನಿಷೇಧ ಮಸೂದೆಯು ರೈತರು ಹಾಗೂ ಚರ್ಮೊದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಡಿಕೆಶಿ ಹೇಳಿದರು.
ಇಡೀ ಪ್ರಪಂಚದ ಶೇ. 11ರಷ್ಟು ಚರ್ಮೊದ್ಯಮದ ಉತ್ಪಾದನೆ ಭಾರತದಲ್ಲಿದೆ. ಉದ್ಯಮ ಮುಚ್ಚಲಿದೆ. ಈ ವಲಯದ ಉದ್ಯೋಗದ ಮೇಲೂ ಪರಿಣಾಮ ಬೀರಲಿದೆ. ಆ ಉದ್ಯೋಗಿಗಳಿಗೆ ಪರ್ಯಾಯ ಬದುಕಿನ ವ್ಯವಸ್ಥೆ ಕಲ್ಪಿಸಲು ಯಾವ ಯೋಜನೆ ರೂಪಿಸಲಾಗಿದೆ? ಎಂದು ಡಿಕೆಶಿ ಪ್ರಶ್ನಿಸಿದರು.
ನಾವು ಅಧಿಕಾರಕ್ಕೆ ಬಂದರೆ, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಲ್ಲ ಜನ ವಿರೋಧಿ ಕಾಯ್ದೆಗಳನ್ನು ವಜಾಗೊಳಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಸರ್ಕಾರ ರೈತರಿಂದ ಹಸು ಖರೀದಿಸಿ ಮಂತ್ರಿಗಳ ಮನೆಯಲ್ಲಿ ಸಾಕಲಿ -ಡಿ.ಕೆ.ಶಿ

