ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ -ಡಿಸಿಎಂ ಸವದಿ

ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ಈಡೇರಿಸಲು ಸಾಧ್ಯವೇ ಇಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ಭಾನುವಾರ ಡಿಸಿಎಂ ಸವದಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಅನ್ನೋ ಬೇಡಿಕೆ ಈಡೇರಿಕೆ ಸಾಧ್ಯವೇ ಇಲ್ಲ ಎಂದು ಸವದಿ ಹೇಳಿದರು.
ಒಂದು ನಿಗಮಕ್ಕೆ ಆ ರೀತಿ ಮಾಡಿದರೆ ಬೇರೆ ನಿಗಮಗಳು ಬೇಡಿಕೆ ಇಡುತ್ತಾರೆ. ಹೀಗಾಗಿ ಆ ಬೇಡಿಕೆ ಈಡೇರಿಕೆ ಅಸಾಧ್ಯ ಎಂದು ಅವರು ತಿಳಿಸಿದರು.
ಉಳಿದ ಎಲ್ಲ ಬೇಡಿಕೆಗಳನ್ನು ಆರ್ಥಿಕ ಇತಿಮಿತಿಗಳಲ್ಲಿ ಈಡೇರಿಸುತ್ತೇವೆ. ಇಂದಿನ ಸಭೆ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಇಂದಿನ ಸಭೆಯಲ್ಲಿ ಅವರು ಬೇಡಿಕೆ ಮಂಡನೆ ಮಾಡಿದ ನಂತರ ಸಿಎಂ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡಿ, ಆ ನಂತರ ಆ ಬಗ್ಗೆ ಘೋಷಣೆ ಮಾಡುತ್ತೇವೆ ಎಂದು ಲಕ್ಷ್ಮಣ ಸವದಿ ಹೇಳಿದರು.
ಎಸ್ಮಾ ಅನ್ನೋದು ಬ್ರಹ್ಮಾಸ್ತ್ರ. ಅದನ್ನು ಸದ್ಯಕ್ಕೆ ಜಾರಿ ಮಾಡುವುದಿಲ್ಲ. ಸಾರಿಗೆ ನೌಕರರೆಲ್ಲರೂ ನಮ್ಮ ಕುಟುಂಬವರು. ಕಷ್ಟದ ಪರಿಸ್ಥಿತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ಭಾವನೆ ಎಂದು ಸಚಿವ ಸವದಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.