ಬೆಂಗಳೂರು: ಮುಷ್ಕರ ಮುಂದುವರೆಸುವುದಾಗಿ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರು ಅವರು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಭಾನುವಾರ ನಡೆದ ಸಚಿವರೊಂದಿಗಿನ ಸಭೆ ನಂತರ ಸಂಧಾನ ಯಶಸ್ವಿಯಾಗಿದೆ ಎಂದು ಹೇಳಿದ್ದ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರು ಅವರು ಪ್ರತಿಭಟನಾ ಸ್ಥಳಕ್ಕೆ ತೆರಳಿದ ನಂತರ ಮುಷ್ಕರ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಸಚಿವರಾದ ಬಸವರಾಜ ಬೊಮ್ಮಾಯಿ, ಆರ್ ಅಶೋಕ್ ಮತ್ತು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಜೊತೆ ಒಕ್ಕೂಟದ ಸದಸ್ಯರು ಮಾತುಕತೆ ನಡೆಸಿದ್ದರು.
ಸಚಿವರೊಂದಿಗಿನ ಸಭೆ ನಂತರ ಮಾತನಾಡಿದ್ದ ಚಂದ್ರು ಅವರು ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಒಪ್ಪಿದೆ ಎಂದು ಹೇಳಿದ್ದರು. ಇದಾದ ಬಳಿಕ ಮೆಜೆಸ್ಟಿಕ್ ನಿಂದ ಹಲವು ಕೆಎಸ್‍ಆರ್ ಟಿಸಿ ಬಸ್ ಗಳು ಸಹ ಸಂಚಾರ ಆರಂಭಿಸಿದ್ದವು. ಆದರೆ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ತೆರಳಿದ ನಂತರ ಚಂದ್ರು ಮುಷ್ಕರವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.
ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದಿಲ್ಲ ಎಂಬ ಬೇಡಿಕೆಯನ್ನು ಬಿಟ್ಟು ಉಳಿದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಮ್ಮತಿಸಿತ್ತು. ಆದರೆ ಪ್ರತಿಭಟನಾ ನಿರತ ನೌಕರರು ಇದನ್ನು ಒಪ್ಪುತ್ತಿಲ್ಲ. ಹೀಗಾಗಿ ಸಂಧಾನ ವಿಫಲವಾಗಿದ್ದು ಮುಷ್ಕರ ಮುಂದುವರೆಯಲಿದೆ ಎಂದಿದ್ದಾರೆ.
ಇದರಿಂದಾಗಿ ನಾಳೆಯಿಂದ ಕೆಎಸ್‍ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಗಳು ರಸ್ತೆಗಿಳಿಯದೇ ಇರುವುದರಿಂದ ಜನ ಸಾಮಾನ್ಯರು ಮತ್ತೆ ತೊಂದರೆ ಅನುಭವಿಸಬೇಕಾಗಿದೆ.
ಮುಷ್ಕರ ಮುಂದುವರೆಸುವುದಾಗಿ ಹೇಳಿದ ನೌಕರರ ಒಕ್ಕೂಟದ ಅಧ್ಯಕ್ಷ

