ಸಾಲು ಸಾಲು ಬಂದ್, ಪ್ರತಿಭಟನೆಗಳೆನೋ ತಮ್ಮ ಬೇಡಿಕೆ ಈಡೇರಿಕೆಗೆ ಹಾಗೂ ತಮಗಾಗುತ್ತಿರುವ ಅನ್ಯಾಯ ಸರಿಪಡಿಸುವಂತೆ ನಿರ್ಧಿಷ್ಟ ಸಂಸ್ಥೆ, ಕೆಲಸ ಮಾಡುತ್ತಿರುವವರು ಕಳೆದ ವಾರದಿಂದಿಚೆಗೆ ನಡೆಸುತ್ತಾ ತಮ್ಮ ಆಕ್ರೋಶವೇನೊ ಹೊರಹಾಕುತ್ತಿದ್ದಾರೆ.
ಆದರೆ ನಿಜವಾಗಿ ಈ ಕರ್ನಾಟಕ ಬಂದ್, ಭಾರತ್ ಬಂದ್ ನಂತರ, ಪ್ರಮುಖ ಸಂಪರ್ಕ ವ್ಯವಸ್ತೆಯ ಕೊಂಡಿಯಾದ ಬಸ್ ಬಂದ್‍ನಿಂದ ಪರಿತಪಿಸುತ್ತಿರುವವರು ಮಾತ್ರ ಸಾರ್ವಜನಿಕರು.
ಒಂದೆಡೆ ಕೊರೋನಾ ಮಹಾಮಾರಿಯಿಂದ ಲಾಕ್ ಡೌನ್‍ಗೆ ಒಳಪಟ್ಟು, 3-4 ತಿಂಗಳು ಕೆಲಸ ಕಾರ್ಯವಿಲ್ಲದೆ ನಲುಗಿದ್ದ ಮಧ್ಯಮ ವರ್ಗ ಮತ್ತು ಕೆಳವರ್ಗ ಒಂದಿಷ್ಟು ಲಾಕ್ ಡೌನ್ ನಿಯಮ ಸಡಿಲವಾದಾಗಿನಿಂದ ತುತ್ತಿನ ಚೀಲ ತುಂಬಿಕೊಳ್ಳಲು ಕೆಲಸ ಕಾರ್ಯದತ್ತ ಮುಖಮಾಡಿ ಉಂಟಾದ ತೊಂದರೆ ಮತ್ತು ಎದುರಿಸಿ ಸಂಕಷ್ಟಗಳನ್ನು ಹಿಮ್ಮೆಟ್ಟಿ ದಿನನಿತ್ಯದ ಕಾಯಕದಲ್ಲಿ ತೊಡಗಿವೆ.
ಇದರಲ್ಲಿ ಕೆಲಸ ಕಳೆದು ಕೊಂಡವರೆಷ್ಟೋ, ಹೊಸ ಉದ್ಯೋಗವನ್ನು ಅನಿವಾರ್ಯವಾಗಿ ಒಪ್ಪಿಕೊಂಡು ಜೀವನ ನಡೆಸುತ್ತಿರುವವರೆಷ್ಟೋ ಮಂದಿ.
ಇನ್ನೂ ಅದೆಷ್ಟೋ ಮಂದಿ ಅತ್ತ ಕೆಲಸವೂ ಇಲ್ಲದೆ, ಇತ್ತ ಲಾಕ್ ಡೌನ್‍ನಲ್ಲಾದ ಸಮಸ್ಯೆಯಿಂದ ಮಾಡಿದ ಸಾಲ-ಸೋಲ ತೀರಿಸಲಾಗದೆ ಅನುಭವಿಸುತ್ತಿರುವ ಕಷ್ಟಗಳು ಇನ್ನೂ ತೀರಿಲ್ಲ.
ಈ ನಡುವೆ, ರೈತರು ನೂತನ ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಮಾಡಿದರು. ಮರಾಠ ಅಭಿವೃದ್ಧಿ ನಿಗಮ ಮಾಡಿದ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಜಾರಿ ಮಾಡಲಾದ ಬಂದ್‍ಗೂ ಯಾರೂ ತಲೆಕೆಡಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.
ಎಂದಿನಂತೆ ಕೆಲಸ ಕಾರ್ಯಗಳನ್ನು ಬಿಡದೆ, ಹೆಜ್ಜೆಹಾಕಿದರು. ಕಾರಣ ಈಗಷ್ಟೆ ಚೇತರಿಸಿಕೊಳ್ಳುತ್ತಿರುವವರಿಗೆ ಇದಾವುದೂ ಅಗತ್ಯವಿರಲಿಲ್ಲ. ಹಲವರು ನೈತಿಕ ಬೆಂಬಲ ನೀಡಿದ್ದರು. ಆದರೆ, ಅಕ್ಷರಶಃ ಬಂದ್‍ಗೆ ಕೈಜೋಡಿಸಲಿಲ್ಲ. ಅವರವರದೇ ಗೋಜಲಿನಲ್ಲಿದ್ದವರಿಗೆ ಈ ಬಂದ್ ಬೇಕಾಗಿಯೂ ಇರಲಿಲ್ಲ.
ಆದರೆ, ಏಕಾಏಕಿ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಬಸ್ ಬಂದ್ ನಿಂದಾಗಿ ಕಷ್ಟದಲ್ಲೆ ದಿನದೂಡುತ್ತಿದ್ದ ಮಧ್ಯಮ ಮತ್ತು ಬಡವರಿಗಂತು ಮತ್ತೆ ಕಂದಕಕ್ಕೆ ನೂಕಿದಂತಾಗಿದೆ.
ಈಗ ತಾನೆ ಚೇತರಿಸಿ ಕೊಳ್ಳುತ್ತಾ ಕೂಲಿ-ನಾಲಿಗೆ ಹೋಗಿ ಬದುಕುತ್ತಿದ್ದವರಿಗೆ ಇತ್ತ ಕೆಲಸಕ್ಕೆ ಹೋಗಲು ಬಸ್ಸಿಲ್ಲ. ಹೋಗದಿದ್ದರೆ ಇರುವ ಕೆಲಸವನ್ನು ಕಳೆದುಕೊಳ್ಳುವ ಭೀತಿಯಂತಹ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.
ತೀರಾ ಇತ್ತೀಚೆಗೆ ಆರಂಭವಾಗಿರುವ ಗಾರ್ಮೆಂಟ್ಸ್, ಕಾರ್ಖಾನೆಗಳವರು ಮತ್ತಿತರ ಕೆಲಸ-ಕಾರ್ಯಗಳು ಸಹ ತಮ್ಮ ಲಾಭ ನಷ್ಟದ ಲೆಕ್ಕಾಚಾರದಲ್ಲಿರುವಾಗ ಕಾರ್ಮಿಕರಿಗೆ ವಿನಾಯಿತಿಯೇನು ಸಿಗದು. ಒಟ್ಟಾರೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಕೆಎಸ್‍ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಬಂದ್ ನಡೆಯುತ್ತಿರುವುದು ಅವರ ಬೇಡಿಕೆಗಳಿಗಾದರೂ ಹೈರಾಣಾಗುತ್ತಿರುವುದು ಮಾತ್ರ ಜನಸಾಮಾನ್ಯರು.
ಕೊರೊನಾ ಭೀತಿಯನ್ನಂತೂ ಇನ್ನೂ ನಿರ್ಲಕ್ಷಿಸುವಂತಿಲ್ಲ. ಎರಡನೇ ಅಲೆಯ ಆವರಿಸುವ ಆತಂಕದಲ್ಲಿರುವಾಗಲೇ ಎಲ್ಲಾ ಮುನ್ನೆಚ್ಚರಿಕೆಯಿಂದ ಆರಂಭಗೊಂಡಿರುವ ಬಸ್, ರೈಲು ಮತ್ತಿತರ ಸಂಪರ್ಕ ವ್ಯವಸ್ಥೆಯನ್ನು ಕೊರೊನಾ ತಟ್ಟದಿರಲು ವಹಿಸಬೇಕಾದ ಎಲ್ಲಾ ಎಚ್ಚರಿಕೆಯಿಂದ ಜನ ಬಳಸುತ್ತಿದ್ದಾರೆ. ಆದರೆ, ಈ ಬಸ್ ಬಂದ್‍ನಿಂದಾಗಿ ಏಕಾಏಕಿ, ಖಾಸಾಗಿ ಬಸ್‍ಗಳಲ್ಲಿ, ಆಟೋಗಳಲ್ಲಿ ಓಡಾಡ ಬೇಕಾಗಿರುವುದರಿಂದ ಜನರಿಗೆ ಭಯವೂ ಕಾಡುತ್ತಿದೆ.
ಬಸ್ ಬಂದ್ ಬಡವರನ್ನು ಕಂದಕಕ್ಕೆ ತಳ್ಳಿದೆ

