ಮೇಲ್ಮನೆ ಘಟನೆ: ರಾಜ್ಯದ ಮೂರು ಪಕ್ಷಗಳು ಮಾಡಿರುವ ಅಪಮಾನ

ಬುದ್ದಿವಂತರ ಛಾವಡಿ ಎಂದೆ ಕರೆಸಿಕೊಳ್ಳುವ ಮೇಲ್ಮನೆಯಲ್ಲಿ ಮಂಗಳವಾರ ಸಭಾಪತಿ ಸ್ಥಾನದ ಅವಿಶ್ವಾಸ ನಿರ್ಣಯದ ಸಂಬಂದ ನಡೆದ ಘಟನಾವಳಿಗಳು ಮಾತ್ರ ಪ್ರಜಾ ಪ್ರಭುತ್ವಕ್ಕೆ ಮಾಡಿರುವ ಅಪಮಾನ.
ಆದರೆ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಸಹ ಸಭಾಪತಿ ಪೀಠÀಕ್ಕಾಗಿ ಮಾಡಿದ ಕಸರತ್ತು ಇಡೀ ದೇಶದಲ್ಲೆ ತಲೆ ತಗ್ಗಿಸುವಂತಾಗಿದ್ದಂತೂ ಸುಳ್ಳಲ್ಲ.
ಜೆಡಿಎಸ್ ಬೆಂಬಲದಿಂದ ಬಿಜೆಪಿ, ಅವಿಶ್ವಾಸ ಮಂಡನೆ ನಂತರ ಸಭಾಪತಿ ಆ ಸ್ಥಾನದಲ್ಲಿ ಕೂರಬಾರದೆಂಬಂತೆ ನಡೆದು ಕೊಂಡರೆ, ಅದನ್ನು ಖಂಡಿಸಿ ಸದನದ ಗೌರವಕ್ಕೆ ಧಕ್ಕೆ ಬರದಂತೆ ಕಾಂಗ್ರೆಸ್ ನಡೆದು ಕೊಳ್ಳಬಹುದಿತ್ತು ಆದರೆ, ಅಲ್ಲೂ ಸಹ ಸದಸ್ಯರು ಬೇರೆ ರೀತಿಯಲ್ಲೆ ವರ್ತಿಸಿದ್ದರಿಂದ ಸದನದಲ್ಲಿ ಕೋಲಾಹಲ ಬಿಟ್ಟು ಬೇರೇನೂ ನಡೆಯಲೇ ಇಲ್ಲ.
ಯಾವುದೇ ಮಸೂದೆಗಳು ವಿಧಾನ ಸಭೆಯಲ್ಲಿ ಅಂಗೀಕಾರ ಪಡೆದರೂ, ನಂತರ ಮೇಲ್ಮನೆಯಲ್ಲಿರುವ ಹಿರಿಯರು, ವಿಷಯ ಸಮಾಲೋಚನಾ ಸಾಮಥ್ರ್ಯ ಪಡೆದವರು ಅದನ್ನು ಅಳೆದೂ ತೂಗಿ ಅಂಗೀಕಾರ ನೀಡುವುದರಿಂದ ಸೂಕ್ತ ಚರ್ಚೆಗೂ ಇಲ್ಲಿ ಅವಕಾಶ ದೊರೆಯುತ್ತದೆ. ಆದರೆ, ಇಂತಹ ವಿವೇಚನಾ ಶೀಲರ ಸದನವಾದ ಮೇಲ್ಮನೆಯಲ್ಲೆ ಈ ಅವಾಂತರ ನಡೆದಿರುವುದು ಮಾತ್ರ ನಿಜಕ್ಕೂ ವಿಷಾದಕರ.
ಗೋಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ಮತ್ತು ಸಭಾಪತಿಯ ಬದಲಾವಣೆಗಾಗಿ ಕರೆಯಲಾಗಿದ್ದ ಒಂದು ದಿನದ ಅಧಿವೇಶನ ಇಡೀ ದೇಶವೇ ಇತ್ತ ತಿರುಗಿನೋಡುವಂತೆ ಮಾಡಿದ್ದಲ್ಲದೆ, ರಾಜ್ಯದ ಇತಿಹಾಸದಲ್ಲೆ ವಿಧಾನ ಪರಿಷತ್ ಕಲಾಪಕ್ಕೆ ಕಪ್ಪು ಚುಕ್ಕೆಯನ್ನೆ ತಂದೋಡ್ಡಿದೆ.
ಜನ ಪ್ರತಿನಿಧಿಗಳು ಜವಾಬ್ದಾರಿಯಿಂದ ನಡೆದು ಕೊಳ್ಳಬೇಕಾದವರೇ ಈ ರೀತಿ ಜಗಜ್ಜಾಹೀರಾಗುವಂತೆ ಅದು ಕೊರೊನಾ ಸಂದರ್ಭದಲ್ಲಿ ಯಾರೊಬ್ಬರೂ ಒಂದಿಷ್ಟು ವೈಯಕ್ತಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೇ ನಡೆದುಕೊಂಡಿರುವ ರೀತಿ ಮಾತ್ರ ನಿಜಕ್ಕೂ ನಾಚಿಕೆ ಗೇಡಿನ ಸಂಗತಿ.
ಜನರಿಗೆ ಮಾದರಿ ಯಾಗಬೇಕಾದವರು ಕಲಾಪದಂತಹ ಮಹತ್ವದ ಸನ್ನಿವೇಶದಲ್ಲಿ ನಡೆದು ಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ರಾಜ್ಯದ ಮೂರು ಪಕ್ಷಗಳು ಮಾಡಿರುವ ಅಪಮಾನ.