ಉಪಸಭಾಪತಿಯನ್ನು ಎಳೆದಾಡಿದ ಕಾಂಗ್ರೆಸ್ ಸದಸ್ಯರು


ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನದಲ್ಲಿ ಕೂತಿದ್ದ ಉಪಸಭಾಪತಿ ಧರ್ಮೇಗೌಡರನ್ನು ಕಾಂಗ್ರೆಸ್ ಸದಸ್ಯರು ಎಳೆದಾಡಿದ್ದಾರೆ.
ಸಭಾಪತಿಸ್ಥಾನದಲ್ಲಿ ಕೂರದಂತೆ ಎಳೆದು ಹಾಕಿದ ಹಿನ್ನೆಲೆ ನಂತರ ಬಿಜೆಪಿ ಸದಸ್ಯರು ಉಪಸಭಾಪತಿ ಧರ್ಮೇಗೌಡರನ್ನು ವಾಪಸ್ ಕರೆ ತಂದು ಆಸನದಲ್ಲಿ ಕೂರಿಸಲು ಮುಂದಾದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆದು ತಳ್ಳಾಟ ನೂಕಾಟ ನಡೆದಿದೆ.
ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಸ್ಥಾನದಲ್ಲಿ ಉಪ ಸಭಾಪತಿ ಜೆಡಿಎಸ್ ನ ಧರ್ಮೇಗೌಡ ಕುಳಿತಿದ್ದದನ್ನು ಕಂಡು ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಅವರನ್ನು ಎಬ್ಬಿಸಿ ಎಳೆದುಕೊಂಡು ಹೋದರು.
ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ನೂಕಾಟ, ತಳ್ಳಾಟ ನಡೆಯಿತು.
ಸಭಾಪತಿ ವಿರುದ್ಧ ಸಲ್ಲಿಸಿರುವ ಅವಿಶ್ವಾಸ ನಿರ್ಣಯ ಸೂಚನೆಯ ಬಗ್ಗೆ ಮೊದಲು ಪ್ರಸ್ತಾಪವಾಗಬೇಕು ಎಂದು ಜೆಡಿಎಸ್- ಬಿಜೆಪಿ ಸದಸ್ಯರು ಒತ್ತಾಯಿಸಿ ಘೋಷಣೆ ಕೂಗಿದರು.
ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ಭಾರಿ ಗದ್ದಲ ಗಲಾಟೆ ಉಂಟಾಗಿದ್ದು ಮಾರ್ಷೆಲ್ ಗಳು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು.
ವಿಧಾನಪರಿಷತ್ ನಲ್ಲಿ ಸಭಾಪತಿ ವಿರುದ್ದದ ಬಿಜೆಪಿಯ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ನೀಡಿದೆ. ಇನ್ನು ಭಾರಿ ಗದ್ದಲ ಗಲಾಟೆ ಉಂಟಾದ ಹಿನ್ನೆಲೆ ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಕಲಾಪವನ್ನ ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ.