ಯಥಾ ರಾಜ ತಥಾ ಪ್ರಜಾ: ಕಾಂಗ್ರೆಸ್ ನವರ ನೈಜ ಬಣ್ಣ ಬಯಲು -ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಚಿಂತಕರ ಚಾವಡಿ ಎಂದು ಕರೆಯಿಸಿಕೊಳ್ಳುವ ಮೇಲ್ಮನೆಯಲ್ಲಿ ಮಂಗಳವಾರ ನಡೆದ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಪ್ರಜಾಪ್ರಭುತ್ವದ ಬಗ್ಗೆ ಪಾಠ ಹೇಳುವ ಕಾಂಗ್ರೆಸ್ ನಾಯಕರ ನೈಜ ಬಣ್ಣ ಬಯಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರ ಅನುಚಿತ ವರ್ತನೆ ಕುರಿತು ಪ್ರತಿಕ್ರಿಯಿಸಿರುವ ಸಚಿವರು, ಸದನದ ಮೇಲ್ಮನೆ ಚಿಂತಕರ ಚಾವಡಿ ಎಂದು ಕರೆಯಿಸಿಕೊಳ್ಳುತ್ತದೆ. ಆದರೆ ಇಲ್ಲಿ ಇಂದು ನಡೆದ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಭಾಷಣ ಮಾಡುವ, ಇತರರಿಗೆ ಪಾಠ ಹೇಳುವ ಕಾಂಗ್ರೆಸ್ ಪಕ್ಷದ ನಾಯಕರ ನೈಜ ಬಣ್ಣ ಬಯಲಾಗಿದೆ ಎಂದು ಹೇಳಿದರು.
ಯಥಾ ರಾಜ ತಥಾ ಪ್ರಜಾ ಎಂಬಂತೆ, ಕೆಪಿಸಿಸಿಗೆ ನೂತನ ಅಧ್ಯಕ್ಷರು ನೇಮಕಗೊಂಡಾಗಿನಿಂದ ಕಾಂಗ್ರೆಸ್ ಪಕ್ಷದವರ ನಡವಳಿಕೆ ಹಾಗೂ ನೈತಿಕತೆ ಪಾತಾಳಕ್ಕೆ ಕುಸಿದಿದೆ. ರಾಜ್ಯದ ಜನರು ಸಜ್ಜನಿಕೆಗೆ ಹೆಸರಾಗಿದ್ದು, ಈ ರೀತಿಯ ಅಸಭ್ಯ ನಡವಳಿಕೆಯನ್ನು ಎಂದೂ ಕ್ಷಮಿಸುವುದಿಲ್ಲ ಎಂದರು ಸಚಿವ ಸುಧಾಕರ್.
2017ರಲ್ಲಿ ಅಂದಿನ ವಿಧಾನಪರಿಷತ್ ನ ಸಭಾಪತಿಗಳಾಗಿದ್ದ ಡಿ.ಎಚ್.ಶಂಕರಮೂರ್ತಿ ಅವರ ವಿರುದ್ಧ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದಾಗ, ಚರ್ಚೆಗೆ ಅವಕಾಶ ನೀಡಿದ್ದರು. ಅಲ್ಲದೆ, ಸಭಾಪತಿ ಪೀಠದಲ್ಲಿ ಅವರು ಕೂರದೆ ಉಪ ಸಭಾಪತಿ ಮೂಲಕ ಕಲಾಪ ನಡೆಸಲಾಗಿತ್ತು. ತಮ್ಮ ವಿರುದ್ಧ ಬಂದ ಎಲ್ಲ ಆರೋಪಗಳಿಗೂ ಶಂಕರಮೂರ್ತಿಯವರು ಉತ್ತರ ನೀಡಿದ್ದರು. ಇದನ್ನು ನೆನಪಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಈ ಕುರಿತು ಸಚಿವ ಡಾ. ಸುಧಾಕರ್ ಅವರು ಸರಣಿ ಟ್ವೀಟ್ ಮಾಡಿದ್ದಾರೆ.