ಸಿದ್ದಲಿಂಗಪುರದಲ್ಲಿ ಸರಳವಾಗಿ ನಡೆದ ಸುಬ್ರಮಣ್ಯ ಷಷ್ಠಿ ಪೂಜೆ

ಮೈಸೂರು: ಮೈಸೂರು ಸಮೀಪದ ಸಿದ್ದಲಿಂಗಪುರದಲ್ಲಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ
ಸರಳವಾಗಿ ಷಷ್ಠಿ ಪೂಜೆ ನೆರವೇರಿತು.
ಕೊರೊನಾ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು.
ಪ್ರತಿವರ್ಷ ವೈಭವದಿಂದ ನಡೆಯುತ್ತಿದ್ದ ಸುಬ್ರಮಣ್ಯ ಷಷ್ಠಿ ಪೂಜೆಯಲ್ಲಿ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಲಕ್ಷಾಂತರ ಭಕ್ತರು ಸಿದ್ದಲಿಂಗಪುರಕ್ಕೆ ಆಗಮಿಸಿ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವರ ದರ್ಶನ ಪಡೆಯುತ್ತಿದ್ದರು.
ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಷಷ್ಠಿ ಜಾತ್ರಾ ಮಹೋತ್ಸವ ರದ್ದು ಮಾಡಿ, ದೇವರ ದರುಶನಕ್ಕೆ ಭಕ್ತರಿಗೆ ನಿಷೇಧ ವಿಧಿಸಲಾಗಿತ್ತು.
ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ಭಾನುವಾರ ಮುಂಜಾನೆ 5 ಗಂಟೆಯಿಂದ 7 ಗಂಟೆ ವರೆಗೆ ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿ ವಿವಿಧ ಪೂಜೆ ಕೈಂಕರ್ಯಗಳು ನೆರವೇರಿತು.
ಸಾರ್ವಜನಿಕರು ದೇವಾಲಯಕ್ಕೆ ಬಾರದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.