ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹವನ್ನು ಆಚರಿಸಿದ ಮೈಸೂರು ರೈಲ್ವೆ ವಿಭಾಗ

ಮೈಸೂರು: ಇಂಧನ ದಕ್ಷತೆ ಮತ್ತು ಸಂರಕ್ಷಣೆಯ ಮಹತ್ವದ ಬಗ್ಗೆ ಸಾಮೂಹಿಕ ಜಾಗೃತಿ ಮೂಡಿಸುವ ಸಲುವಾಗಿ, ಮೈಸೂರು ರೈಲ್ವೆ ವಿಭಾಗವು ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವ ರಾಷ್ಟ್ರದ ಒಟ್ಟಾರೆ ಪ್ರಯತ್ನಗಳ ಭಾಗವಾಗಿ ತನ್ನ ಸಮಗ್ರ ಅಭಿವೃದ್ಧಿಯತ್ತ ಸಾಗಲು ಕಾರ್ಯ ನಿರ್ವಹಿಸುತ್ತಾ ಡಿ. 14 ರಿಂದ 21 ರವರೆಗೆ ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹವನ್ನು ಆಚರಿಸಿತು.
ವಾರದ ಸುದೀರ್ಘ ಆಚರಣೆಯಲ್ಲಿ ಇಂಧನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು, ವಿಭಾಗವು ಬ್ಯಾನರ್‍ಗಳ ಪ್ರದರ್ಶನ, ಕರಪತ್ರಗಳ ವಿತರಣೆ, ಸೆಮಿನಾರ್‍ಗಳು, ಬೈಸಿಕಲ್ ರ್ಯಾಲಿ ಮತ್ತು ಸಿಬ್ಬಂದಿಗೆ ಚಿತ್ರಕಲೆ ಸ್ಪರ್ಧೆಯಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿತು.
ಮೌಲ್ಯಮಾಪನ ದಿನದಂದು, ವಿಭಾಗವು ಇಂಧನ ಸಂರಕ್ಷಣೆ ಕುರಿತು ವೆಬ್‍ನಾರ್ ಅನ್ನು ವ್ಯವಸ್ಥೆಗೊಳಿಸಿತು. ವೆಬ್‍ನಾರ್ ಅನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಉದ್ಘಾಟಿಸಿದರು. ಖಾಲಿ ಇರುವ ರೈಲ್ವೆ ಭೂಮಿಯಲ್ಲಿ 5 ಮೆಗಾವ್ಯಾಟ್ ಸೌರ ಶಕ್ತಿ ಮೂಲವನ್ನು ಸ್ಥಾಪಿಸುವ ವಿಭಾಗದ ಪ್ರಸ್ತಾವನೆಯ ಜೊತೆಗೆ, ಎಲ್ಲಾ ಸಾಂಪ್ರದಾಯಿಕ ಫಾನ್ ಗಳನ್ನು ಶಕ್ತಿಯ ದಕ್ಷತೆ ಹೆಚ್ಚಿರುವ ಇತ್ತೀಚಿನ ಪೀಳಿಗೆಯ ಫಾನ್ ಗಳಿಂದ ಬದಲಾಯಿಸುವುದು ಮತ್ತು ಶಕ್ತಿ ಮತ್ತು ನೀರಿನ ವ್ಯರ್ಥವನ್ನು ವಿಶ್ಲೇಷಿಸಲು ಪಂಪ್‍ನ ಶಕ್ತಿಯ ಲೆಕ್ಕಪರಿಶೋಧನೆಯನ್ನು ಯೋಜಿಸಲಾಗುತ್ತಿದೆ ಎಂದ ಹೇಳಿದರು.
ವಿಭಾಗದ ಸಾಧನೆಗಳನ್ನು ಎತ್ತಿ ತೋರಿಸುತ್ತಾ, ಯಾರ್ರ್ಡ್ ನಲ್ಲಿ ಲೊಕೊಗಳನ್ನು ಸ್ಥಗಿತಗೊಳಿಸುವ ಮೂಲಕ ಮೈಸೂರು ವಿಭಾಗವು ಪ್ರತಿ ತಿಂಗಳು ಸರಾಸರಿ 1, 87 ಸಾವಿರ ಲೀಟರ್ ಡೀಸೆಲ್ ಅನ್ನು ಉಳಿಸಿದೆ ಎಂದು ಅವರು ತಿಳಿಸಿದರು.
272 ಲೆವೆಲ್ ಕ್ರಾಸಿಂಗ್ ಗೇಟ್‍ಗಳಲ್ಲಿ 190 ಗೇಟ್‍ಗಳನ್ನು ಸ್ಥಗಿತಗೊಳಿಸಿದಾಗ ತುರ್ತು ದೀಪಗಳಿಗಾಗಿ ಸೌರ ಶಕ್ತಿಯ ಬ್ಯಾಕ್ ಅಪ್ ಇನ್ವರ್ಟರ್‍ಗಳನ್ನು ಮತ್ತು 2020ರಲ್ಲಿ ನಾಲ್ಕು ನಿಲ್ದಾಣಗಳಿಗೆ ಸೌರ ಪಂಪ್‍ಗಳನ್ನು ಒದಗಿಸಿದೆ ಎಂದು ತಿಳಿಸಿದರು.
ಕಚೇರಿ ಖಾಲಿಯಾಗಿ ಇದ್ದಾಗಲೆಲ್ಲಾ ಇಂಧನ ಬಳಕೆಯನ್ನು ನಿಯಂತ್ರಿಸಲು 30 ಕಚೇರಿಗಳಲ್ಲಿ ಆಕ್ಯುಪೆನ್ಸಿ ಸೆನ್ಸರ್ ಗಳನ್ನು ಒದಗಿಸಲಾಗಿದೆ. ವಿಭಾಗವು ಆರ್.ಇ.ಎಸ್.ಸಿ.ಒ. ಮಾದರಿಯಲ್ಲಿ ಮೈಸೂರಿನಲ್ಲಿ 210 ಕೆ.ಡಬ್ಲ್ಯೂ.ಪಿ. ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ್ದು, ಇದು ಮೇ 2018 ರಿಂದ ಇಲ್ಲಿಯವರೆಗೆ ಸುಮಾರು 6,73,569 ಯುನಿಟ್ ಗಳನ್ನು ಉತ್ಪಾದಿಸಿ 27,02,360 ರೂಪಾಯಿಗಳನ್ನು ಉಳಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ-1 ಎ.ದೇವಸಹಾಯಂ, ಹಿರಿಯ ವಿಭಾಗೀಯ ವಿದ್ಯುತ್ ಎಂಜಿನಿಯರ್ ಸೌಂದರ ರಾಜನ್ ಉಪಸ್ಥಿತರಿದ್ದರು.