ಬೆಂಗಳೂರು: ಕೋವಿಡ್-19 ಹೊಸ ರೂಪಾಂತರ ಪತ್ತೆಯಾದ ಹಿನ್ನೆಲೆ ರಾಜ್ಯಾದ್ಯಂತ ಬುಧವಾರ (ಡಿ. 23) ರಾತ್ರಿಯಿಂದಲೇ ನೈಟ್ ಕರ್ಪ್ಯೂ ಜಾರಿಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದರು.
ಸಿಎಂ ಬಿಎಸ್ ವೈ ಅವರು ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬುಧವಾರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಯಲ್ಲಿರುತ್ತದೆ ಎಂದು ಸಿಎಂ ತಿಳಿಸಿದರು.
ನೈಟ್ ಕರ್ಪ್ಯೂ 2021ರ ಜನವರಿ 2ರವರೆಗೆ ರಾಜ್ಯದಲ್ಲಿ ಇರಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಬ್ರಿಟನ್ ದೇಶದಿಂದ ಹೊಸ ಸ್ವರೂಪದ ಕೊರೇನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.
ಹೊಸ ಸ್ವರೂಪದ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಕರ್ಫ್ಯೂ ಜಾರಿ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಹೇಳಿದ ಸಿಎಂ ಅವರು, ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದರು.
ರಾತ್ರಿ 10 ಗಂಟೆಯ ನಂತರ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಅಂಗಡಿ ಮುಂಗಟ್ಟುಗಳು ಬಾಗಿಲು ಬಂದ್ ಮಾಡಬೇಕು. ಅಂತರರಾಜ್ಯ ಜನ ಸಂಚಾರವನ್ನೂ ನಿಷೇಧಿಸಲಾಗಿದೆ ಎಂದರು.
ರಾತ್ರಿಯ ವೇಳೆ ಔಷಧ ಅಂಗಡಿ, ಆಸ್ಪತ್ರೆ ಇತ್ಯಾದಿ ಅಗತ್ಯ ಸೇವೆಗಳಿಗೆ ಅವಕಾಶ ಇರುತ್ತದೆ ಎಂದರು.

