ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ -ಡಿಕೆಶಿ

ಬೆಂಗಳೂರು: ಕಾಂಗ್ರೆಸ್ ಈ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗವಹಿಸಿ ಮಾತನಾಡಿದರು.
ಒಂದು ಮಾತು ಸತ್ಯ. ಕಾಂಗ್ರೆಸ್ ಈ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಗುರಿ ರಾಜ್ಯ ಹಾಗೂ ದೇಶದಲ್ಲಿ ಈ ಕಾಂಗ್ರೆಸ್ ಧ್ವಜ ಹಾರಿಸುವುದು. ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡೋಣ ಎಂದು ಕಾರ್ಯಕರ್ತರಿಗೆ ಡಿಕೆಶಿ ಕರೆ ನೀಡಿದರು.
ನಿಮ್ಮ ತಂದೆಯವರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡಿದ್ದು ಇದೇ ಕಾಂಗ್ರೆಸ್ ಶಾಲು ಎಂದು ಡಿ. ಕೆ. ಶಿವಕುಮಾರ್ ಮಾಜಿ ಸಿಎಂ ಕುಮಾರ್ ಸ್ವಾಮಿ ಅವರನ್ನು ಕುರಿತು ಹೇಳಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾನು ರೈತರ ಹೋರಾಟದಲ್ಲಿ ಭಾಗವಹಿಸುವಾಗ ಹಸಿರು ಶಾಲು ಹಾಕಿಕೊಂಡಿದ್ದನ್ನು ಉಲ್ಲೇಖಿಸಿ ಕಾಂಗ್ರೆಸ್ ಶಾಲಿಗೆ ಶಕ್ತಿ ಇಲ್ಲ, ಹೀಗಾಗಿ ಹಸಿರು ಶಾಲು ಹಾಕಿಕೊಂಡಿದ್ದಾರೆ ಎಂದು ಟೀಕಿಸಿದರು.
ಆಗ ನಾನು ತಾಳ್ಮೆಯಿಂದ, ನಿಮ್ಮ ತಂದೆಯವರನ್ನು ಈ ದೇಶದ ಪ್ರಧಾನಿಯನ್ನಾಗಿ ಮಾಡಿದ್ದು ಇದೇ ಕಾಂಗ್ರೆಸ್ ಶಾಲು. ನಾವೇ ಬಲವಂತ ಮಾಡಿಯೋ ಏನೋ ಅಂತೂ ಕುಮಾರಸ್ವಾಮಿ ಅವರನ್ನೂ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಇದೇ ಕಾಂಗ್ರೆಸ್ ಶಾಲು ಎಂದು ಹೇಳಿದ್ದೆ ಎಂದರು.
ಅವರು ನನ್ನನ್ನು ವೈಯಕ್ತಿಕವಾಗಿ ನಿಂದಿಸಲಿ, ಸಹಿಸಿಕೊಳ್ಳುತ್ತೇನೆ. ಆದರೆ ಈ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದರೆ ಈ ಡಿ.ಕೆ. ಶಿವಕುಮಾರ್ ಎಂದಿಗೂ ಸ್ವಾಭಿಮಾನ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.
ಇವತ್ತು ಬಿಜೆಪಿಗೆ ಇಷ್ಟು ದೊಡ್ಡ ಬಹುಮತ ಬಂದಿದೆ. ಆದರೆ ದೇಶದಲ್ಲಿ ರೈತರು, ಕಾರ್ಮಿಕರ ವಿಚಾರದಲ್ಲಿ ಎಷ್ಟು ಅಶಾಂತಿ ಮೂಡಿದೆ. ನನ್ನ ಜಿಲ್ಲೆಯಲ್ಲಿ ಟೊಯೊಟಾ ಕಂಪನಿ ಇದೆ. ಇಂದು ಸಾವಿರಾರು ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಅವರ ಸಮಸ್ಯೆ ಏನು ಅಂತಾ ಕೇಳಲು ತಯಾರಿಲ್ಲ ಎಂದು ಟೀಕಿಸಿದರು.