15 ಸಾವಿರ ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿ -ಡಿಸಿಎಂ

ಬೆಂಗಳೂರು: ರಾಜ್ಯದ ವಿವಿಧೆಡೆಯಲ್ಲಿರುವ ಕರ್ನಾಟಕ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರ (ಜಿಟಿಟಿಸಿ)ಗಳಲ್ಲಿ ಮುಂದಿನ ವರ್ಷದಿಂದ 15 ಸಾವಿರ ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿ ನೀಡಿ ಕುಶಲ ಕಾರ್ಮಿಕರನ್ನಾಗಿ ರೂಪಿಸುವ ಗುರಿಯನ್ನು ರಾಜ್ಯ ಸರಕಾರ ಹಾಕಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದರು.
ನಗರದ ರಾಜಾಜಿನಗರದಲ್ಲಿರುವ ಪ್ರತಿಷ್ಠಿತ ಕರ್ನಾಟಕ ಉಪಕರಣಾಗಾರ ಹಾಗೂ ತರಬೇತಿ ಸಂಸ್ಥೆ (ಜಿಟಿಟಿಸಿ)ಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಈ ವಿಷಯ ಪ್ರಕಟಿಸಿದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಜಿಟಿಟಿಸಿ ನೀಡುವ ತರಬೇತಿಗೆ ಹೆಚ್ಚಿನ ಬೇಡಿಕೆ ಇದ್ದು, ಇದುವರೆಗೂ ವರ್ಷಕ್ಕೆ 6 ಸಾವಿರ ಮಂದಿಗಷ್ಟೇ ವಾರ್ಷಿಕ ಅಲ್ಪಾವಧಿ ತರಬೇತಿ ನೀಡಲಾಗುತ್ತಿತ್ತು. ಇನ್ನು ಕೈಗಾರಿಕೆ ಉದ್ಯೋಗ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಕುಶಲಭರಿತ ಮಾನವ ಸಂಪನ್ಮೂಲವನ್ನು ಕೈಗಾರಿಕೆಗಳಿಗೆ ಒದಗಿಸಲಾಗುವುದು ಎಂದರು.
ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಒಂದು ಜಿಟಿಟಿಸಿ (ರಾಜಾಜಿನಗರ) ಇದ್ದು, ಶೀಘ್ರದಲ್ಲೇ ಇನ್ನೂ ಎರಡು ಜಿಟಿಟಿಸಿಗಳನ್ನು ಯಲಹಂಕ ಮತ್ತು ಯಶವಂತಪುರದಲ್ಲಿ ಸ್ಥಾಪನೆ ಮಾಡಲಾಗುವುದು. ಹೆಚ್ಚು ಡಿಮಾಂಡ್ ಇರುವ ಮೆಕಟ್ರಾನಿಕ್ಸ್ (ಮೆಕಾನಿಕಲ್-ಎಲೆಕ್ಟ್ರಾನಿಕ್ಸ್) ವಿಭಾಗವನ್ನು ಇನ್ನೂ ಕೆಲವು ಜಿಟಿಟಿಸಿಗಳಲ್ಲೂ ಆರಂಭಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 24 ಜಿಟಿಟಿಸಿಗಳು ಯಶಸ್ವಿಯಾಗಿ ಕಾರ್ಯಾಚರಿಸುತ್ತಿವೆ. ಶೀಘ್ರದಲ್ಲೇ ವಿಜಯಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನೂತನ ಜಿಟಿಟಿಸಿಗಳನ್ನು ತೆರೆಯಲಾಗುವುದು ಎಂದರು.
ಚಳ್ಳಕೆರೆ, ಕೊಪ್ಪಳ, ಚಿತ್ರದುರ್ಗ, ಹುಣಸೂರು ಮತ್ತು ಮಡಿಕೇರಿಗಳಲ್ಲಿ ನಿರ್ಮಾಣ ಹಂತದಲ್ಲಿರುವ ಜಿಟಿಟಿಸಿ ಕ್ಯಾಂಪಸ್ಸುಗಳು ಆದಷ್ಟು ಬೇಗ ಲೋಕಾರ್ಪಣೆಗೊಳ್ಳಲಿವೆ ಎಂದ ಅವರು ಕಲ್ಯಾಣ ಕರ್ನಾಟಕದ ಭಾಗದಲ್ಲಿರುವ ಜಿಟಿಟಿಸಿಗಳನ್ನು ಮೇಲ್ದರ್ಜೆಗೇರಿಸಲಾಗುವುದೆಂದರು.
ಕರ್ನಾಟಕ ಉಪಕರಣಾಗಾರ ಹಾಗೂ ತರಬೇತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.