ಮೋದಿಯಿಂದ ಲೈಟ್ ಹೌಸ್ ಪ್ರಾಜೆಕ್ಟ್ ಗೆ ಶಂಕುಸ್ಥಾಪನೆ

ನವದೆಹಲಿ: ಕಡಿಮೆ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸುವ ಲೈಟ್ ಹೌಸ್ ಪ್ರಾಜೆಕ್ಟ್ (ಎಲ್‍ಎಚ್‍ಪಿ) ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಬಡವರು ಮತ್ತು ಮಧ್ಯಮವರ್ಗದವರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.
ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ (ಜಿಎಚ್‍ಟಿಸಿ-ಇಂಡಿಯಾ)ದಡಿ ತ್ರಿಪುರ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ತಮಿಳುನಾಡು ಮತ್ತು ಆಂಧ್ರಪ್ರದೇಶ ಆರು ರಾಜ್ಯಗಳಲ್ಲಿ ಎಲ್‍ಎಚ್‍ಪಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಪ್ರತಿ ನಗರದಲ್ಲಿ ಒಂದು ಸಾವಿರ ಮನೆಗಳಂತೆ 12 ತಿಂಗಳೊಳಗೆ ದೇಶದ ಆರು ರಾಜ್ಯಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದÀಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ಈ ಯೋಜನೆಯಡಿ ಆಧುನಿಕ ತಂತ್ರಜ್ಞಾನ ಮತ್ತು ನವೀನ ಪ್ರಕ್ರಿಯೆಗಳಿಂದ ಕಡಿಮೆ ಸಮಯದಲ್ಲಿ, ಕೈಗೆಟಕುವ ಬೆಲೆಯಲ್ಲಿ ಉನ್ನತ ತಂತ್ರಜ್ಞಾನದ ಮನೆಗಳನ್ನು ನಿರ್ಮಿಸಲಾಗುವುದೆಂದರು.
ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ದೇಶಗಳಲ್ಲಿ ಅನುಸರಿಸಿರುವ ಆಧುನಿಕ ನಿರ್ಮಾಣ ಪದ್ಧತಿಯನ್ನು ಈ ಯೋಜನೆಯಡಿ ಅಳವಡಿಸಲಾಗುತ್ತಿದೆ ಎಂದು ಮೋದಿ ತಿಳಿಸಿದರು.