ವಿಶ್ವದಲ್ಲೇ ಅತಿ ದೊಡ್ಡ ಪ್ರಮಾಣದ ಲಸಿಕೆ ಹಂಚಿಕೆ ಪ್ರಕ್ರಿಯೆ ದೇಶದಲ್ಲಿ ನಡೆಯಲಿದೆ -ಮೋದಿ

ನವದೆಹಲಿ: ವಿಶ್ವದಲ್ಲೇ ಅತಿ ದೊಡ್ಡ ಪ್ರಮಾಣದ ಲಸಿಕೆ ಹಂಚಿಕೆ ಪ್ರಕ್ರಿಯೆ ದೇಶದಲ್ಲಿ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಮೋದಿ ಅವರು ರಾಷ್ಟ್ರೀಯ ಮೆಟ್ರಾಲಜಿ ಕಾನ್ ಕ್ಲೇವ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ವಿಶ್ವದಲ್ಲೇ ಅತಿದೊಡ್ಡ ಕೊರೋನಾ ಲಸಿಕೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಡ್ರೈ ರನ್ ಆರಂಭವಾಗಿದೆ ಎಂದು ತಿಳಿಸಿದರು.
ಹೊಸ ವರ್ಷದಲ್ಲಿ ದೇಶಕ್ಕೆ ಎರಡು ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ. ಇದಕ್ಕಾಗಿ ವಿಜ್ಞಾನಿಗಳಿಗೆ ಅಭಿನಂದನೆಗಳು ಎಂದರು.
ದೇಶದ ವಿಜ್ಞಾನಿಗಳು ಕೋವಿಡ್-19 ಲಸಿಕೆ ಸಂಶೋಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ವಿಜ್ಞಾನಿಗಳ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆಂದು ಮೋದಿ ತಿಳಿಸಿದರು.
ಭಾರತವು ಹೊಸ ಗುರಿಗಳನ್ನು ಹೊಂದಿದೆ. ಹೊಸ ಸವಾಲುಗಳನ್ನು ಹೊಂದಿದೆ. ಭಾರತವು ಅವುಗಳನ್ನು ಉತ್ತಮವಾಗಿ ಎದುರಿಸುತ್ತಿದೆ ಎಂದು ಮೋದಿ ಹೇಳಿದರು.
ನಾವು ಬ್ರಾಂಡ್ ಇಂಡಿಯಾವನ್ನು ಗುಣಮಟ್ಟದ, ಅಳತೆಯ ಪ್ರಮಾಣದಲ್ಲಿ ವಿಶ್ವಾಸಾರ್ಹ ಹೆಸರನ್ನಾಗಿ ಮಾಡಬೇಕು. ಭಾರತೀಯ ಉತ್ಪನ್ನಗಳನ್ನು ಖರೀದಿಸುವ ಪ್ರತಿಯೊಬ್ಬರ ಹೃದಯವನ್ನು ನಾವು ಗೆಲ್ಲಬೇಕು ಎಂದರು.
ಗುಣಮಟ್ಟದ ಮಾಪನಕ್ಕಾಗಿ ನಾವು ವಿದೇಶಿ ಮಾನದಂಡಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು ಎಂದು ಮೋದಿ ತಿಳಿಸಿದರು.
ಸ್ವಾವಲಂಬಿ ಭಾರತದ ಕನಸನ್ನು ಈಡೇರಿಸುವುದು ಬಹಳ ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದರು.