ಡಾ. ರಾಜ್ ಜತೆ ನಟಿಸುದ್ದ ಶನಿ ಮಹಾದೇವಪ್ಪ ಕೊರೊನಾಗೆ ಬಲಿ

ಬೆಂಗಳೂರು: ಕನ್ನಡದ ಖ್ಯಾತ ನಟ ಶನಿ ಮಹಾದೇವಪ್ಪ ಅವರು ನಿಧನರಾಗಿದ್ದಾರೆ.
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಶನಿ ಮಹಾದೇವಪ್ಪ ಅವರು ನಗರದ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ಅವರು ಕೊನೆಯುಸಿರೆಳೆದಿದ್ದಾರೆ.
ಶನಿ ಮಹದೇವಪ್ಪ ಅವರ ಅಂತ್ಯಕ್ರಿಯೆ ಸೋಮವಾರ ನಗರದ ಸುಮನಹಳ್ಳಿ ಚಿತಾಗಾರದಲ್ಲಿ ನಡೆಯಲಿದೆ.
ಕನ್ನಡದ ಮೇರು ನಟ ಹಾಗೂ ವರನಟ ಡಾ. ರಾಜಕುಮಾರ್ ಅವರ ಜತೆ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ಶನಿ ಮಹಾದೇವಪ್ಪ ಅವರು ನಟಿಸಿದ್ದರು.
ಕನ್ನಡ ಚಿತ್ರರಂಗ ಕಂಡ ಅಪರೂಪದ ನಟರಲ್ಲಿ ಒಪ್ಪರಾಗಿದ್ದ ಶನಿ ಮಹಾದೇವಪ್ಪ, ಕನ್ನಡದ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಕವಿರತ್ನ ಕಾಳಿದಾಸ, ಬಬ್ರುವಾಹನ, ಶ್ರೀನಿವಾಸ ಕಲ್ಯಾಣ, ಭಕ್ತ ಕುಂಬಾರ ಸೇರಿದಂತೆ ಹಲವು ಪೌರಾಣಿಕ ಚಿತ್ರಗಳಲ್ಲಿ ಹಾಗೂ ರಾಮಾಯಣದಲ್ಲಿ ರಾಕ್ಷಸರು, ಒಂಟಿ ಸಲಗ, ಆತ್ಮಬಂಧನ, ಮನಮೆಚ್ಚಿದ ಸೊಸೆ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.
ಕವಿರತ್ನ ಕಾಳಿದಾಸ ಚಿತ್ರದಲ್ಲಿನ ಕವಿ ಡಿಂಡಿಮನ ಪಾತ್ರವೂ ಸೇರಿದಂತೆ ನೂರಾರು ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸುವ ಮೂಲಕ ಶನಿ ಮಹಾದೇವಪ್ಪ, ಬೆಳ್ಳಿತೆರೆಯ ಮೇಲೆ ತಮ್ಮದೇ ಆದ ಛಾಪು ಮೂಡಿಸಿದ್ದರು.
ಶನಿ ಮಹಾದೇವಪ್ಪ ಅವರ ಹುಟ್ಟೂರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಬೆಳಕವಾಡಿ. ಅವರ ತಂದೆ ಕೆಂಚಪ್ಪ ಹಳ್ಳಿಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ತಂದೆ ನಟಿಸುತ್ತಿದ್ದ ನಾಟಕಗಳನ್ನು ನೋಡುತ್ತಾ ಬೆಳೆದ ಅವರು ರಂಗಭೂಮಿಯತ್ತ ಆಕರ್ಷಿತರಾದರು. ರಾಜಾ ವಿಕ್ರಮ ನಾಟಕದೊಂದಿಗೆ ಬಣ್ಣ ಹಚ್ಚಿದ ಅವರಿಗೆ ಶನೀಶ್ವರ ಮಹಾತ್ಮೆಯ ಶನಿದೇವನ ಪಾತ್ರ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು.
ಈ ಯಶಸ್ಸಿನೊಂದಿಗೆ ಮಹದೇವಪ್ಪ ಮುಂದಿನ ದಿನಗಳಲ್ಲಿ ಶನಿ ಮಹಾದೇವಪ್ಪ ಎಂದೇ ಖ್ಯಾತರಾದರು.
ಕನ್ನಡ ಥಿಯೇಟರ್ಸ್ ಮತ್ತು ಗುಬ್ಬಿ ಕಂಪನಿಯ ಬಡವನ ಬಾಳು, ಅತ್ತೆ ಸೊಸೆ, ಬಿಡುಗಡೆ, ಸತ್ಯವಿಜಯ, ಚಂದ್ರಹಾಸ ನಾಟಕಗಳಲ್ಲಿ ಅಭಿನಯಿಸಿದರು.
ಧರ್ಮಸ್ಥಳ ಮಹಾತ್ಮೆ (1962) ಚಿತ್ರದ ಬ್ರಹ್ಮನ ಪಾತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಶನಿ ಮಹಾದೇವಪ್ಪ ಮುಂದೆ ಹತ್ತು ಹಲವು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾ ಬಂದರು. ಭಕ್ತ ಕುಂಬಾರ ಚಿತ್ರದಲ್ಲಿ ಜ್ಞಾನೇಶ್ವರನಾಗಿ, ಮೂರೂವರೆ ವಜ್ರಗಳು ಚಿತ್ರದಲ್ಲಿ ಶಕುನಿಯಾಗಿ, ಕವಿರತ್ನ ಕಾಳಿದಾಸ ಚಿತ್ರದಲ್ಲಿ ಡಿಂಡಿಮ ಕವಿಯಾಗಿ ಹೀಗೆ ಹತ್ತಾರು ಪಾತ್ರಗಳಲ್ಲಿ ಶನಿ ಮಹಾದೇವಪ್ಪ ಸಿನಿ ಪ್ರೇಮಿಗಳಲ್ಲಿ ನೆನಪಾಗಿ ಉಳಿದಿದ್ದಾರೆ.
ಕಳೆದೊಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶನಿ ಮಹಾದೇವಪ್ಪ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಶನಿ ಮಹಾದೇವಪ್ಪ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.
ಸಿನಿ ಪ್ರಿಯರು ಅಗಲಿದ ಹಿರಿಯ ನಟನಿಗೆ ನಮನ ಸಲ್ಲಿದ್ದಾರೆ.