ವಿಜಯಪುರ: ಸಿಎಂ ಮನೆಯಲ್ಲಿಯೇ ಹಾವು, ಚೇಳುಗಳಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಯತ್ನಾಳ್ ಮಾತನಾಡಿದರು.
ಹಾವು, ಚೇಳುಗಳ ಮಧ್ಯೆ ಸಿಎಂ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ನೀಡಿದ ಹೇಳಿಕೆಗೆ ಯತ್ನಾಳ್ ತಿರುಗೇಟು ನೀಡಿದರು.
ಸಿಎಂ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಈಗ ಸಿಎಂ ಅವರನ್ನು ಹಿಡಿದಿಟ್ಟುಕೊಂಡಿದ್ದಾರೆ. ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿದ್ದಾಗ ಅವರ ನಿವಾಸದಲ್ಲಿ ಯಾರೂ ಇರುತ್ತಿರಲಿಲ್ಲ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರದು ದೊಡ್ಡ ತಂಡವಿದೆ. ತಮಗೆ ಬೇಡವಾದವರ ನಕಲಿ ಸಿಡಿ ತಯಾರಿಸುವ ಕೇಂದ್ರವಿದೆ. ಈ ಬಗ್ಗೆ ತಮ್ಮ ಬಳಿ ಮಾಹಿತಿಯಿದೆ. ಎಂದು ಯತ್ನಾಳ್ ಹೇಳಿದರು.
ಆದಿ ಬಣಜಿಗ, ಪಂಚಮಸಾಲಿಯನ್ನು 2ಎಗೆ ಸೇರಿಸುವುದಾಗಿ ಗುಲಬರ್ಗಾ ಉಪಚುನಾವಣೆ ಸಂದರ್ಭದಲ್ಲಿ ಹೇಳಿದ್ದೀರಿ. ಈವರೆಗೆ ಯಾಕೆ ನೀಡಿಲ್ಲ? ಹಾಲುಮತ, ಎಸ್. ಟಿ. ಮೀಸಲಾತಿ ಪ್ರಮಾಣ ಹೆಚ್ಚಳ ಯಾಕೆ ಮಾಡಿಲ್ಲ? 2ಎ ಸೇರಿಸುವುದು ಸಿಎಂ ಕೈಯಲ್ಲಿದೆ ಎಂದರು.
ಇದರ ಹಿಂದೆ ವಿಜಯೇಂದ್ರ, ಮುರುಗೇಶ ನಿರಾಣಿ ದೊಡ್ಡ ಸಂಚು ನಡೆಸಿದ್ದಾರೆಂದು ಅವರು ಆರೋಪಿಸಿದರು.
ನಿರಾಣಿ ಅವರಿಗೆ ಸಚಿವರಾಗಲು ಮಾತ್ರ ಸಮಾಜ ಬೇಕಿದೆ. ಸಚಿವರಾದ ಬಳಿಕ ಸಿಎಂ ಪರ ಮಾತನಾಡುತ್ತಿದ್ದಾರೆ. ಸಿಎಂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ, ಉಳಿದವರಿಗೂ ನೀಡಬೇಕು. ಮೀಸಲಾತಿ ಬೇಡಿಕೆ ಬೆಂಕಿ ಹಚ್ಚಿದವರೇ ನಿರಾಣಿ ಎಂದು ದೂರಿದರು.
ಈಗ ಮಂತ್ರಿಯಾದ ನಂತರ ಮುಖ್ಯಮಂತ್ರಿಗಳಿಗೆ ಮನಸ್ಸಿಗೆ ನೋವಾಗಬಾರದು ಅಂತಾರೆ. ಕಳೆದ ವರ್ಷ ಹರಿಹರದಲ್ಲಿ ಆ ಸ್ವಾಮಿ ಕಡೆಯಿಂದ ಏನೇನು ಮಾತನಾಡಿಸಿದ್ದೀರಿ? ನಿರಾಣಿಯನ್ನು ಸಚಿವರನ್ನಾಗಿ ಮಾಡದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಗದರಿಸಿದ್ದೀರಿ. ಈಗ ಸಚಿವರಾದ ನಂತರ ಅದೇನು ಗುರಾಣಿ ಆಯ್ತಾ ನಿರಾಣಿ ಎಂದು ಪ್ರಶ್ನಿಸಿದರು.
ಸಿಎಂ ಮನೆಯಲ್ಲಿಯೇ ಹಾವು, ಚೇಳುಗಳಿವೆ -ಬಸನಗೌಡ ಪಾಟೀಲ ಯತ್ನಾಳ

