ಬೆಂಗಳೂರಿನ ಪ್ರತಿ ವಿಧಾನಸಭೆ ಕ್ಷೇತ್ರಕ್ಕೊಂದು ಜಾಗತಿಕ ಗುಣಮಟ್ಟದ ಪದವಿ ಕಾಲೇಜು – ಡಿಸಿಎಂ

ಬೆಂಗಳೂರು: ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಗಳಲ್ಲಿ ಗುಣಮಟ್ಟದ ಪದವಿ ಕಾಲೇಜುಗಳನ್ನು ಸ್ಥಾಪನೆ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಡಿಸಿಎಂ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.
ಗುಣಮಟ್ಟದ ಕಲಿಕೆ, ಬೋಧನೆ ಮತ್ತು ಸಂಶೋಧನೆ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ. ಅದರಂತೆ ಬೆಂಗಳೂರು ಕೇಂದ್ರ (ಸೆಂಟ್ರಲ್ ಕಾಲೇಜ್), ಬೆಂಗಳೂರು (ಜ್ಞಾನಭಾರತಿ) ಹಾಗೂ ಬೆಂಗಳೂರು ಉತ್ತರ (ಕೋಲಾರ) ವಿಶ್ವವಿದ್ಯಾಲಯಗಳ ಮೂಲಕವೇ ಇಷ್ಟೂ ವಿಧಾನಸಭೆ ಕ್ಷೇತ್ರಗಳಲ್ಲಿ ಅತ್ಯುತ್ತಮ ಗುಣಮಟ್ಟದ ಪದವಿ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದರು.
ಬೆಂಗಳೂರು ಅಗಾಧವಾಗಿ ಬೆಳೆಯುತ್ತಿದ್ದು, ಜನಸಂಖ್ಯೆ 1.50 ಕೋಟಿಯನ್ನೂ ಮೀರಿದೆ. ಈ ಹಿನ್ನೆಲೆಯಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಬೇಕಾದರೆ ಇಷ್ಟು ಕಾಲೇಜುಗಳ ನಿರ್ಮಾಣ ಅಗತ್ಯ ಎಂದರು.
ಒಂದು ವೇಳೆ ಇಲ್ಲದಿದ್ದರೆ ಹೊಸ ಕಾಲೇಜನ್ನು ನಿರ್ಮಾಣ ಮಾಡಲಾಗುವುದು. ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲಾಗದೆ ಆರ್ಥಿಕ- ಸಾಮಾಜಿಕವಾಗಿ ಹಿಂದುಳಿದಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಈ ಮೂಲಕ ಗುಣಮಟ್ಟದ ಶಿಕ್ಷಣ ಸಿಗಲಿದೆ ಎಂದು ಡಿಸಿಎಂ ಹೇಳಿದರು.
ಶಿಕ್ಷಣ ನೀತಿಯಲ್ಲಿ ಉಲ್ಲೇಖ ಮಾಡಿರುವ ಅಂಶಗಳ ಆಧಾರದ ಮೇಲೆ ಉದ್ಯೋಗಾಧಾರಿತ, ವೃತ್ತಿಪರ ಮತ್ತು ಜಾಗತಿಕವಾಗಿ ಬೇಡಿಕೆ ಹೊಂದಿರುವ ಕೋರ್ಸುಗಳನ್ನೂ ಆರಂಭಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.
ಪ್ರಸ್ತುತ ರಾಜ್ಯದ ಪದವಿ ಕಾಲೇಜುಗಳಲ್ಲಿ ಬೋಧಕರ ಕೊರತೆ ಇದೆ. ಇದಲ್ಲದೆ ಇನ್ನೂ 8 ಸಾವಿರ ಬೋಧಕ ಹುದ್ದೆಗಳನ್ನು ಮಂಜೂರು ಮಾಡುವಂತೆ ಕೋರಲಾಗಿದೆ. ಈಗ ಖಾಲಿ ಇರುವ ಹುದ್ದೆಗಳ ಜತೆಗೆ ಈ ಹುದ್ದೆಗಳ ಮಂಜೂರು ಮಾಡಬೇಕಾಗಿದೆ ಎಂದರು.
ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಬೇಡಿಕೆ ಸಲ್ಲಿಸಲಾಗಿದೆ. ಹಾಗೇಯೇ, ಇಲಾಖೆಗೆ ಸಿಗುತ್ತಿರುವ ಒಟ್ಟಾರೆ ಅನುದಾನ ಕಡಿಮೆ ಇದ್ದು, ರಾಜ್ಯದ ಒಟ್ಟು ಬಜೆಟ್ ಗಾತ್ರದಲ್ಲಿ ಶೇ. 3.5ರಷ್ಟು ಮೊತ್ತವನ್ನು ಉನ್ನತ ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಮನವಿ ಮಾಡಲಾಗಿದೆ ಎಂದವರು ತಿಳಿಸಿದರು.